ಬಾಂಬ್ ಸ್ಫೋಟಿಸಿ ರೈಲಿನ ಹಳಿತಪ್ಪಿಸಿದ ಬಂಡುಕೋರರು
ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಮೇಲೆ ಮತ್ತೆ ದಾಳಿ ನಡೆದಿದೆ. ಸಿಬಿ ಜಿಲ್ಲೆಯ ಬಳಿಯ ನಾಸಿರಾಬಾದ್ ಪ್ರದೇಶದಲ್ಲಿ ಜಾಫರ್ ಎಕ್ಸ್‌ಪ್ರೆಸ್ ಮೇಲೆ ಈ ದಾಳಿ ನಡೆಸಲಾಗಿದೆ. ಈ ಬಾರಿ ಬಾಂಬ್ ಸ್ಫೋಟದಲ್ಲಿ ಜಾಫರ್ ಎಕ್ಸ್‌ಪ್ರೆಸ್‌ನ ಹಲವಾರು ಬೋಗಿಗಳು ಹಳಿತಪ್ಪಿವೆ. ಬಲೂಚ್ ರಿಪಬ್ಲಿಕನ್ ಗಾರ್ಡ್ (ಬಿಆರ್‌ಜಿ) ಬಂಡುಕೋರರ ಗುಂಪು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಈ ದಾಳಿಯಲ್ಲಿ ಹಲವಾರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ಯಾವುದೇ ಸಾವುನೋವು ಸಂಭವಿಸಿರುವುದನ್ನು ಪಾಕಿಸ್ತಾನ ದೃಢಪಡಿಸಿಲ್ಲ. ದಾಳಿಯ ನಂತರ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ. ಜಾಫರ್ ಎಕ್ಸ್‌ಪ್ರೆಸ್ ಮೇಲೆ ಈ ಹಿಂದೆಯೂ ಹಲವಾರು ಬಾರಿ ದಾಳಿ ಮಾಡಲಾಗಿದೆ.
ರೈಲು ಹಾದುಹೋದ ಕೆಲವೇ ಕ್ಷಣಗಳಲ್ಲಿ ಜಾಫರ್ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಅಳವಡಿಸಲಾಗಿದ್ದ ಸ್ಫೋಟಕ ಸಾಧನ ಸ್ಫೋಟಗೊಂಡಿದೆ. ಪರಿಣಾಮ ರೈಲು ಹಳಿತಪ್ಪಿತ್ತು. ಪಾಕಿಸ್ತಾನ ರೈಲ್ವೆಯ ಜಾಫರ್ ಎಕ್ಸ್‌ಪ್ರೆಸ್ ಕ್ವೆಟ್ಟಾ ಮತ್ತು ಪೇಶಾವರ ನಡುವೆ ಚಲಿಸುತ್ತದೆ. ಇದು ಪ್ರಯಾಣಿಕ ರೈಲಾಗಿದ್ದು, ಪ್ರತಿದಿನ ಒಂದು ಟ್ರಿಪ್ ಮಾಡುತ್ತದೆ.
























