ಮನೆಯ ಶೆಡ್ನ್ನು ಕಸಾಯಿಖಾನೆಯಾಗಿ ಪರಿವರ್ತಿಸಿ ಜಾನುವಾರು ವಧೆ
ಬಂಟ್ವಾಳ : ಇಲ್ಲಿನ ಅರಳ ಗ್ರಾಮದಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಪೊಲೀಸರು ಭಾನುವಾರ ದಾಳಿ ಮಾಡಿ ನಾಲ್ಕು ಜಾನುವಾರುಗಳನ್ನು ರಕ್ಷಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅರಳ ಗ್ರಾಮದ ನಿವಾಸಿ ಮಯ್ಯದ್ದಿ (57) ಬಂಧಿತ ಆರೋಪಿ. ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಮನೆಯ ಆವರಣದಲ್ಲಿರುವ ಶೆಡ್ ಬಳಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮೂವರು ಮಾಂಸ ಮಾಡುತ್ತಿರುವುದು ಕಂಡುಬಂದಿದೆ.
ಶೆಡ್ನಲ್ಲಿದ್ದ ಮೂರು ಹಸುಗಳನ್ನು ಮತ್ತು ಒಂದು ಕರುವನ್ನು ರಕ್ಷಿಸಲಾಗಿದೆ. ಸ್ಥಳದಿಂದ ಸುಮಾರು 150 ಕೆ.ಜಿ. ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮನೆಯ ಶೆಡ್ನ್ನೆ ಕಸಾಯಿಖಾನೆಯಾಗಿ ಪರಿವರ್ತಿಸಿಕೊಂಡು ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದರು. ಮಯ್ಯದ್ದಿಯ ಮನೆ ಹಾಗೂ ಶೆಡ್ನ ಆವರಣವನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ. ಮಂಗಳೂರು ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗೆ ಮುಟ್ಟುಗೋಲು ಹಾಕಲು ವರದಿ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
























