ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಓರ್ವ ಬಾಲಕ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕುತ್ರೋಟ್ಟು ಟಿ.ಬಿ.ಕ್ರಾಸ್ ರಸ್ತೆಯ ಹೊಕ್ಕಿಲ ಎಂಬಲ್ಲಿ ನಡೆದಿದೆ.
ನಾವೂರಿನ ಶಶಿ ಎಂಬವರ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಆಟೋದಲ್ಲಿದ್ದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಂಡಡ್ಕ ನಿವಾಸಿ ಗಣೇಶ್ ಪುತ್ರ ತನ್ವಿತ್(12) ಎಂಬ ಬಾಲಕ ಮೃತಪಟ್ಟಿದ್ದಾನೆ. ಆಟೋ ಪಲ್ಟಿಯಾದ ರಭಸಕ್ಕೆ ಗಾಯಗೊಂಡಿದ್ದ ತನ್ವಿತ್‌ನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆಟೋದಲ್ಲಿದ್ದ ಐದು ಮಂದಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವಕ್ಕೆ ಆಟೋದಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.
























