ನ್ಯಾಯಸಮ್ಮತ ಚುನಾವಣೆ ನಡೆದಿಲ್ಲ ಎಂದು ಆರೋಪ
ನವದೆಹಲಿ: ಬಿಹಾರ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಕಾಂಗ್ರೆಸ್ ನಾಯಕರು ಚುನಾವಣಾ ಅಯೋಗವನ್ನು ಸ್ಪರ್ಧೆಗೆ ಬಿದ್ದವರಂತೆ ದೂಷಿಸತೊಡಗಿದ್ದಾರೆ. ಸೋಲಿನ ಎಲ್ಲ ಹೊಣೆಯನ್ನು ಚುನಾವಣಾ ಆಯೋಗಕ್ಕೆ ಕಟ್ಟುತ್ತಿದ್ದಾರೆ. ಕಾಂಗ್ರೆಸ್‌ನ ಅಧಿನಾಯಕ ರಾಹುಲ್ ಗಾಂಧಿ, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್, ವಕ್ತಾರ ಹರೀಶ್ ಖೇರಾ ಅವರಿಂದ ಹಿಡಿದು ಪ್ರತಿಯೊಬ್ಬರು ಚುನಾವಣಾ ಆಯೋಗದ ಸಹಕಾರದಿಂದಲೇ ಬಿಜೆಪಿ ಗೆಲ್ಲುತ್ತಿದೆ ಎಂದು ಹೇಳುತ್ತಿದ್ದಾರೆ.
ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಹಾರ ವಿಧಾನಸಭಾ ಚುನಾವಣೆ ಆರಂಭದಿಂದಲೂ ನ್ಯಾಯಯುತವಾಗಿ ನಡೆದಿಲ್ಲ ಎಂದು ಆರೋಪಿಸಿದ್ದಾರೆ. 243 ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ 200ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತಿದ್ದಂತೆ ಎಕ್ಸ್‌ನಲ್ಲಿ ಈ ಬಗ್ಗೆ ರಾಹುಲ್ ಗಾಂಧಿ ಪೋಸ್ಟ್ ಮಾಡಿ ಫಲಿತಾಂಶ ಆಶ್ಚರ್ಯಕರವಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
ಮಹಾಘಟಬಂಧನ್‌ಗೆ ಬೆಂಬಲಿಸಿದ ಬಿಹಾರದ ಲಕ್ಷಾಂತರ ಮತದಾರರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಬಿಹಾರದಲ್ಲಿ ಈ ಫಲಿತಾಂಶ ನಿಜಕ್ಕೂ ಆಶ್ಚರ್ಯ ತಂದಿದೆ. ಆರಂಭದಿಂದಲೂ ನ್ಯಾಯಯುತವಾಗಿ ನಡೆಯದ ಈ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾವು ಬಿಹಾರದ ಜನರ ನಿರ್ಧಾರವನ್ನು ಗೌರವಿಸುತ್ತೇವೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವಲ್ಲಿ ತೊಡಗಿರುವ ಶಕ್ತಿಗಳ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ನಾವು ಚುನಾವಣಾ ಫಲಿತಾಂಶಗಳ ಕೂಲಂಕಷ ಅಧ್ಯಯನ ಮಾಡುತ್ತೇವೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯಾವ ಕಾಂಗ್ರೆಸ್ ಕಾರ್ಯಕರ್ತರು ನಿರುತ್ಸಾಹಗೊಳ್ಳುವ ಅಗತ್ಯವಿಲ್ಲ. ನಿಮ್ಮ ಕಠಿಣ ಪರಿಶ್ರಮವೇ ನಮ್ಮ ಶಕ್ತಿ. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಾವು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಜನರ ನಡುವೆ ಉಳಿಯುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟವನ್ನು ನಾವು ಮುಂದುವರಿಸುತ್ತೇವೆ. ನಾವು ಸಂಪೂರ್ಣ ಸಮರ್ಪಣೆ, ಧೈರ್ಯ ಮತ್ತು ಸತ್ಯದಿಂದ ಹೋರಾಡುತ್ತೇವೆ ಎಂದು ಅವರು ಬರೆದುಕೊಂಡಿದ್ದಾರೆ.
























