ಹೆದ್ದಾರಿ ಬಂದ್ ಮಾಡಿ ಸುರಕ್ಷತಾ ಕ್ರಮ ಕೈಗೊಂಡ ಅಧಿಕಾರಿಗಳು
ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಜಂಕ್ಷನ್‌ನಲ್ಲಿ ಅಥರ್ವಾ ಆಸ್ಪತ್ರೆ ಬಳಿ ಸಿಎನ್‌ಜಿ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಒಂದರಲ್ಲಿ ಶುಕ್ರವಾರ ರಾತ್ರಿ ಸೋರಿಕೆ ಉಂಟಾಗಿ ಪರಿಸರದಲ್ಲಿ ಆತಂಕದ ಪರಿಸ್ಥಿತಿ ಉಂಟಾಯಿತು. ಕೂಡಲೇ ಸುರಕ್ಷತಾ ಕ್ರಮ ಕೈಗೊಂಡು ಪರಿಸ್ಥಿತಿ ನಿಯಂತ್ರಿಸಲಾಯಿತು.
ಬೈಕಂಪಾಡಿ ಗೈಲ್ ಪಂಪ್‌ನಿಂದ ಸಿಎನ್‌ಜಿ ತುಂಬಿಸಿಕೊಂಡು ಉಡುಪಿ ಕಡೆ ಹೋಗುತ್ತಿದ್ದ ಟ್ಯಾಂಕರ್ ಸುರತ್ಕಲ್ ತಲುಪುತ್ತಿದ್ದಂತೆ ಸೋರಿಕೆ ಆರಂಭವಾಗಿತ್ತು. ಚಾಲಕ ತಕ್ಷಣ ಟ್ಯಾಂಕರನ್ನು ಹೆದ್ದಾರಿ ಬದಿ ನಿಲ್ಲಿಸಿ ಅಪಾಯದ ಮುನ್ಸೂಚನೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಕೆಲಕಾಲ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಯಿತು.
ಸಿಎನ್‌ಜಿ ನೈಸರ್ಗಿಕ ಅನಿಲ ವ್ಯಾಪ್ತಿಗೆ ಬರುವುದರಿಂದ ಅಡುಗೆ ಇಂಧನದಷ್ಟು ಅಪಾಯಕಾರಿ ಅಲ್ಲದಿದ್ದರೂ ಭಾರಿ ಪ್ರಮಾಣದಲ್ಲಿ ಅಗ್ನಿ ಅವಘಡವಾದಾಗ ಸಿಲಿಂಡರ್ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ಕೆಲಕಾಲ ತಡೆ ಹಿಡಿದ ಪರಿಣಾಮ ವಾಹನ ದಟ್ಟಣೆ ಉಂಟಾಯಿತು. ಸುರತ್ಕಲ್ ಸಂಚಾರಿ ಪೊಲೀಸರು ಕಾರ್ಯಾಚರಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
























