ಬಿ.ಸಿ.ರೋಡ್‌ ಅಪಘಾತ : ಮೃತರ ಸಂಖ್ಯೆ ಮೂರಕ್ಕೇರಿಕೆ

ಬೆಳ್ಳಂಬೆಳಗ್ಗೆ ಸರ್ಕಲ್‌ಗೆ ಗುದ್ದಿದ ಇನ್ನೋವಾ ಕಾರು ; ಉಡುಪಿ ಕೃಷ್ಣ ಮಠಕ್ಕೆ ಹೋಗುತ್ತಿದ್ದ ಯಾತ್ರಿಕರು

ಮಂಗಳೂರು : ಇಂದು ಮುಂಜಾನೆ ಬಿ.ಸಿ.ರೋಡ್‌ನಲ್ಲಿ ಕಾರು ಸರ್ಕಲ್‌ಗೆ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಉಡುಪಿ ಬರುತ್ತಿದ್ದ ಕಾರು ಬೆಳ್ಳಂಬೆಳಗ್ಗೆ ಬಿ.ಸಿ.ರೋಡ್‌ನಲ್ಲಿ ನಾರಾಯಣ ಗುರು ವೃತ್ತಕ್ಕೆ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ಕಲ್‌ಗೆ ಗುದ್ದಿದ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಕಾರಿನಲ್ಲಿದ್ದ ಬೆಂಗಳೂರಿನ ರಮ್ಯ(23), ರವಿ‌(64) ಮತ್ತು ನಂಜಮ್ಮ(75) ಮೃತ ದುರ್ದೈವಿಗಳು. ಚಾಲಕ ಸುಬ್ರಹ್ಮಣ್ಯ ಮತ್ತು ಕಿರಣ್‌ ಎಂಬಿಬ್ಬರು ಗಾಯಗೊಂಡಿದ್ದಾರೆ. ಇನ್ನಿಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಬೆಂಗಳೂರಿನ ಪೀಣ್ಯದವರಾಗಿದ್ದು, ಉಡುಪಿ ಶ್ರೀಕೃಷ್ಣ ಮಠಕ್ಕೆ ಕೃಷ್ಣನ ದರ್ಶನಕ್ಕೆಂದು ಹೊರಟಿದ್ದರು.





















































 
 

ಕಾರಿನಲ್ಲಿ 9 ಮಂದಿ ಇದ್ದರು ಎನ್ನಲಾಗಿದೆ. ಮೃತರಲ್ಲಿ ಓರ್ವ ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರ ಹತ್ತಿರದ ಸಂಬಂಧಿ ಎನ್ನಲಾಗುತ್ತಿದೆ. ಆದರೆ ಇದು ಇನ್ನೂ ದೃಢಪಟ್ಟಿಲ್ಲ. ನಸುಕಿನ ಸುಮಾರು 4.30ರ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಯಾಣಿಕರಲ್ಲಿ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಕೀರ್ತಿ, ಸುಶೀಲಾ, ಬಿಂದು ಹಾಗೂ ಪ್ರಶಾಂತ್ ಎಂಬ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿ.ಸಿ.ರೋಡು – ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ನಿರ್ಮಾಣವಾದ ನೂತನ‌ ಸರ್ಕಲ್ ಅವೈಜ್ಞಾನಿಕವಾಗಿರುವುದರಿಂದಲೇ ಈ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಹೊಸ ಸರ್ಕಲ್‌ ನಿರ್ಮಾಣವಾದ ಬಳಿಕ ಸಂಭವಿಸಿದ ಮೊದಲ ಭೀಕರ ಅಪಘಾತ ಇದು. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top