ಬಿಹಾರ: ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ ಭರ್ಜರಿ ಗೆಲುವಿನತ್ತ ಮುಖ ಮಾಡಿದೆ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಅತೀದೊಡ್ಡ ಪಕ್ಷವಾಗಿ ಅರಳುವ ಹಾದಿಯಲ್ಲಿದೆ ಎಂದು ಚು. ಆಯೋಗದ ವರದಿ ಹೇಳಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ 190ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 101 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 80ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ರಾಜ್ಯದ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ. ದೆಹಲಿ, ಮಹಾರಾಷ್ಟ್ರ ಮತ್ತು ಹರಿಯಾಣದ ನಂತರ ಬಿಹಾರದಲ್ಲಿಯೂ ಬಿಜೆಪಿ ಅತ್ಯುತ್ತಮ ಸಾಧನೆಗೈದಿದೆ. ಜೆಡಿಯು 70 ಸ್ಥಾನಗಳಲ್ಲಿ ಮುನ್ನಡೆ ಗಳಿಸಿ ಗಮನಾರ್ಹ ಸಾಧನೆ ಮಾಡಿದೆ. ಆ ಮೂಲಕ ಪ್ರಧಾನಿ ಮೋದಿ – ನಿತೀಶ್ ಕುಮಾರ್ ಜೋಡಿ ಬಿಹಾರದಲ್ಲಿ ಮೋಡಿ ಮಾಡಿದೆ ಎನ್ನುವುದು ಸಾಬೀತಾಗಿದೆ.
ಮಹಾಘಟಬಂಧನದ RJD 140 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದು ಕೇವಲ 32 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಮುಖಭಂಗ ಅನುಭವಿಸಿದೆ. 61 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ನಗೆಪಾಟಿಲಿಗೀಡಾಗಿದೆ.
























