ಎನ್ಡಿಎ ಮತ್ತೆ ಗೆಲುವಿನ ಹಾರ ಧರಿಸುತ್ತಾ?; ಮಹಾಘಟಬಂಧನ್ ಅಧಿಕಾರದ ಕನಸು ನನಸಾಗುತ್ತಾ?
ಪಾಟ್ನಾ: ಜಿದ್ದಾಜಿದ್ದಿನ ಹೋರಾಟ ಕಂಡ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು, ಇಡೀ ದೇಶ ಈ ಫಲಿತಾಂಶವನ್ನು ಕುತೂಹಲದಿಂದ ಎದುರು ನೋಡುತ್ತಿದೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮತ್ತು ಆರ್ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಗ್ಯಾರಂಟಿಗಳ ಮಹಾಪೂರವನ್ನೇ ಹರಿಸಿ ಮತದಾರರ ಮನಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿವೆ.
ಚುನಾವಣೋತ್ತರ ಸಮೀಕ್ಷೆಗಳೆಲ್ಲ ಎನ್ಡಿಎ ಮೈತ್ರಿಕೂಟಕ್ಕೆ ಬಿಹಾರದ ಗೆಲುವಿನ ಹಾರ ಎಂದು ಭವಿಷ್ಯ ನುಡಿದಿದ್ದರೂ ಮಹಾಘಟಬಂಧನ್ ಕೂಡ ಗೆಲುವಿನ ವಿಶ್ವಾಸದಲ್ಲಿದೆ.
ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ರಾಜ್ಯದ 46 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಬಹುತೇಕ ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ನಿಚ್ಚಳವಾಗಬಹುದು.
ಸಮಸ್ಟಿಪುರದಲ್ಲಿ ಖಾಲಿ ಇವಿಎಂಗಳು ಪತ್ತೆಯಾಗಿದ್ದು, ಆರ್ಜೆಡಿ ಪ್ರತಿಭಟನೆ ಮಾಡಿದೆ. ಇವಿಎಂಗಳ ಟ್ಯಾಂಪರ್ ಆದರೆ ಬಿಹಾರದಲ್ಲಿ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾದಲ್ಲಿ ಆದಂಥ ದಂಗೆ ಬಿಹಾರದಲ್ಲಿ ಆಗುತ್ತೆ ಅಂತ ಆರ್ಜೆಡಿ ನಾಯಕ ಸುನೀಲ್ ಸಿಂಗ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಹಿಂದೆ ಸಮಸ್ಟಿಪುರದ ಕಾಲೇಜ್ವೊಂದರಲ್ಲಿ ವಿವಿಪ್ಯಾಟ್ ಸ್ಲಿಪ್ಗಳು ಸಿಕ್ಕಿದ್ದವು. ಆದರೆ, ಇವು ಪ್ರಾಯೋಗಿಕವಾಗಿ ಬಳಸಲಾಗಿದ್ದ ಸ್ಲಿಪ್ಗಳು ಅಂತ ಕೇಂದ್ರ ಚುನಾವಣಾ ಆಯೋಗವೇ ಸ್ಪಷ್ಟನೆ ಕೊಟ್ಟಿತ್ತು.
243 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 6, 11ರಂದು 2 ಹಂತದ ಮತದಾನ ಆಗಿದ್ದು, ಶೇ.67.13ರಷ್ಟು ಐತಿಹಾಸಿಕ ವೋಟಿಂಗ್ ದಾಖಲಾಗಿದೆ. ಈ ಬಾರಿ ಮಹಿಳೆಯರು ಶೇ.71ರಷ್ಟು ಮತದಾನ ಮಾಡಿದ್ದು, ಮಹಿಳೆಯರ ಮತ ನಿರ್ಣಾಯಕವಾಗಿದೆ. ಈ ಬಾರಿಯ ದಾಖಲೆಯ ಮತದಾನವೇ ಫಲಿತಾಂಶವನ್ನು ನಿರ್ಧರಿಸಲಿದೆ ಎಂದು ರಾಜಕೀಯ ಪ<ಡಿತರು ಲೆಕ್ಕ ಹಾಕಿದ್ದಾರೆ.
ಗೆಲುವಿನ ಅಮಿತ ವಿಶ್ವಾಸದಲ್ಲಿರುವ ಬಿಜೆಪಿ ಸಂಭ್ರಮಾಚರಣೆಗಾಗಿ ನಿನ್ನೆಯಿಂದಲೇ ತಯಾರಿ ಆರಂಭಿಸಿದೆ. ಭಾರಿ ಪ್ರಮಾಣದಲ್ಲಿ ಲಡ್ಡು, ರಸಗುಲ್ಲ ಹಂಚಲು ಬಿಜೆಪಿ ತಯಾರಿ ನಡೆಸಿದೆ.
ಅಧಿಕಾರಕ್ಕೇರಲು 122 ಸ್ಥಾನಗಳ ಸರಳ ಬಹುಮತ ಅಗತ್ಯವಾಗಿದ್ದು, ಎಕ್ಸಿಟ್ ಪೋಲ್ಗಳಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ಸಿಗುವ ಸಾಧ್ಯತೆಗಳು ಇವೆ. ದೀರ್ಘಾವಧಿ ಸಿಎಂ ಆಗಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಐದನೇ ಬಾರಿ ಅಧಿಕಾರ ಚುಕ್ಕಾಣಿ ಹಿಡೀತಾರಾ ಅಥವಾ ಹೊಸ ಪಕ್ಷ ಅಧಿಕಾರಕ್ಕೆ ಬರಲಿದೆಯಾ ಎನ್ನುವ ಕುತೂಹಲ ಇದೆ. ಎಕ್ಸಿಟ್ ಪೋಲ್ಗಳು ಎನ್ಡಿಎಗೆ ಅಧಿಕಾರ ಸಿಗುತ್ತೆ ಅಂತ ಹೇಳಿವೆ. ಇಂಡಿಯಾ ಒಕ್ಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಈ ಸಮೀಕ್ಷೆ ಫಲಿತಾಂಶಗಳು ಸುಳ್ಳಾಗಲಿವೆ ಎಂದಿದ್ದಾರೆ.
























