ಕಾರು ಚಲಾಯಿಸಿದ ವ್ಯಕ್ತಿಯ ಡಿಎನ್‌ಎ ಕುಟುಂಬವರೊಂದಿಗೆ ಮ್ಯಾಚ್
ನವದೆಹಲಿ: ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟ ಮಾಡಿದ್ದು ಡಾ. ಉಮರ್ ನಬಿ ಎನ್ನುವುದು ಡಿಎನ್‌ಎ ಪರೀಕ್ಷೆಯಲ್ಲಿ ದೃಢಡಪಟ್ಟಿದೆ. ಐ20 ಕಾರನ್ನು ಚಲಾಯಿಸಿದ ವ್ಯಕ್ತಿ ಡಾ.ಉಮರ್ ಎಂದು ತನಿಖಾಧಿಕಾರಿಗಳು ಶಂಕಿಸಿದ್ದರು. ಹೀಗಿದ್ದರೂ ಚಾರ್ಜ್‌ಶೀಟ್ ಸಲ್ಲಿಕೆ ಮಾಡುವಾಗ ಮೃತ ವ್ಯಕ್ತಿ ಉಮರ್ ಎನ್ನುವುದಕ್ಕೆ ವೈಜ್ಞಾನಿಕ ದಾಖಲೆಯ ಅಗತ್ಯ ಇತ್ತು. ಈ ಕಾರಣಕ್ಕೆ ಪುಲ್ವಾಮಾದಲ್ಲಿರುವ ಉಮರ್ ಕುಟುಂಬಸ್ಥರ ಡಿಎನ್‌ಎ ಸಂಗ್ರಹಿಸಲಾಗಿತ್ತು.
ಸ್ಫೋಟದ ನಂತರ ಡಾ.ಉಮರ್ ಕಾಲು ಸ್ಟಿಯರಿಂಗ್ ವೀಲ್ ಮತ್ತು ಆಕ್ಸಿಲರೇಟರ್ ನಡುವೆ ಸಿಲುಕಿಕೊಂಡಿತ್ತು. ಡಿಎನ್ಎ ಮಾದರಿ ಉಮರ್ ತಾಯಿಯ ಮಾದರಿಯೊಂದಿಗೆ ಹೊಂದಿಕೆಯಾಗಿದೆ ಎಂದು ದೆಹಲಿ ಪೊಲೀಸರ ಮೂಲಗಳು ತಿಳಿಸಿವೆ.
ದೆಹಲಿ ಸ್ಫೋಟದ ಪ್ರಮುಖ ಶಂಕಿತ ಆರೋಪಿ ಉಮರ್ ನಬಿ ಶ್ರೀನಗರದಿಂದ ಎಂಬಿಬಿಎಸ್ ಮತ್ತು ಎಂಡಿ ಪದವಿಗಳನ್ನು ಪಡೆದು 2023ರಲ್ಲಿ ಕಾಶ್ಮೀರದ ಅನಂತ್‌ನಾಗ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಎಸ್‌ಆರ್ ಆಗಿ ಕೆಲಸ ಮಾಡುತ್ತಿದ್ದ. ಆರಂಭದಿಂದಲೂ ಉಮರ್ ಕೆಲಸ ವಿಷಯದಲ್ಲಿ ಕೆಟ್ಟ ಉದ್ಯೋಗಿಯಾಗಿಯೇ ಕಾಣಿಸಿಕೊಂಡಿದ್ದ. ದಿನೇದಿನೇ ಒಂದಿಲ್ಲೊಂದು ದೂರುಗಳು ಬರುತ್ತಲೇ ಇದ್ದವು. ಸಹ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಸೇರಿದಂತೆ ರೋಗಿಗಳು ಕೂಡ ಉಮರ್‌ನ ಅಸಭ್ಯ ಹಾಗೂ ಅಜಾಗರೂಕತೆ ಬಗ್ಗೆ ಆರೋಪಿಸುತ್ತಿದ್ದರು. ಅಲ್ಲದೇ ಉಮರ್ ಕೂಡ ಹೆಚ್ಚಿನ ಸಮಯ ಆಸ್ಪತ್ರೆಗೆ ಗೈರಾಗಿಯೇ ಇರುತ್ತಿದ್ದ.
ಈ ನಡುವೆ ಡಾ.ಉಮರ್ ನಬಿ ಹೆಸರಿನಲ್ಲಿ ನೋಂದಾಯಿಸಲಾದ ಎರಡನೇ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕೆಂಪು ಇಕೋಸ್ಪೋರ್ಟ್ ಕಾರು ಸ್ಫೋಟದಲ್ಲಿ ಮುಖ್ಯ ಪಾತ್ರ ವಹಿಸಿರುವ ಸಾಧ್ಯತೆಯಿದೆ. ದೆಹಲಿ ಪೊಲೀಸರು ವಿವಿಧ ದಿಕ್ಕುಗಳಲ್ಲಿ ಹುಡುಕಾಟವನ್ನು ತೀವ್ರಗೊಳಿಸಿದ ನಂತರ ಹರಿಯಾಣದ ಖಂಡವಾಲಿ ಗ್ರಾಮದ ತೋಟದ ಮನೆಯಲ್ಲಿ ಕೆಂಪು ಫೋರ್ಡ್ ಇಕೋಸ್ಪೋರ್ಟ್ (ನೋಂದಣಿ DL 10 CK 0458) ಅನ್ನು ವಶಪಡಿಸಿಕೊಳ್ಳಲಾಗಿದೆ.
ಸ್ಫೋಟಕ್ಕೆ ಕಾರಣವಾದ ಐ20 ಮಾತ್ರವಲ್ಲದೆ ಆರೋಪಿಗಳು ಪ್ಲಾನ್ ಮತ್ತು ಅಪರಾಧದ ಸಮಯದಲ್ಲಿ ಮತ್ತೊಂದು ಕಾರಾದ ಕೆಂಪು ಇಕೋಸ್ಪೋರ್ಟ್ ಬಳಸಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದಾದ ನಂತರ ಆ ಕಾರಿಗೆ ಹುಡುಕಾಟ ನಡೆದಿತ್ತು. ಹಲವು ರಾಜ್ಯಗಳಲ್ಲೂ ಹುಡುಕಾಟ ನಡೆಸಲಾಗಿತ್ತು. ಸಾಕಷ್ಟು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿತ್ತು.
ಈ ಸ್ಫೋಟದಲ್ಲಿ ಎರಡನೇ ಕಾರಿನ ಪಾತ್ರವನ್ನು ಇನ್ನೂ ಪೊಲೀಸರು ಬಿಟ್ಟುಕೊಟ್ಟಿಲ್ಲ. ಆದರೆ, ಆ ಕಾರು ಸಿಕ್ಕಿರುವುದರಿಂದ ಅದು ಈ ಸ್ಫೋಟದ ತನಿಖೆಯಲ್ಲಿ ಮುಖ್ಯ ಸುಳಿವುಗಳನ್ನು ನೀಡುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ದೆಹಲಿ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಡಾ.ಉಮರ್ ಉನ್ ನಬಿಗೆ ಸಂಬಂಧಿಸಿದ ಶಂಕಿತ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಬಗ್ಗೆ ದೆಹಲಿ ಪೊಲೀಸರು ಈ ಹಿಂದೆ ಎಚ್ಚರಿಕೆ ನೀಡಿದ್ದರು. ಈ ವಾಹನವು ಉಮರ್ ಉನ್ ನಬಿ ಹೆಸರಿನಲ್ಲಿ ನೋಂದಾಯಿಸಲಾಗಿದೆ. ದೆಹಲಿ ಪೊಲೀಸರು ಉತ್ತರ ಪ್ರದೇಶ ಮತ್ತು ಹರಿಯಾಣ ಪೊಲೀಸರೊಂದಿಗೆ ಕಾರಿನ ವಿವರಗಳನ್ನು ಹಂಚಿಕೊಂಡಿದ್ದರು. ಕೊನೆಗೂ ಇದು ಪೊಲೀಸರ ಕೈಗೆ ಸಿಕ್ಕಿದೆ.
























