ಮನೆಯಲ್ಲಿ ಹಠಾತ್ ಕುಸಿದು ಬಿದ್ದ ನಟ
ಮುಂಬೈ : ಬಾಲಿವುಡ್ ಹಿರಿಯ ನಟ ಗೋವಿಂದ ಅವರನ್ನು ನಿನ್ನೆ ತಡರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಮುಂಬೈಯಲ್ಲಿರುವ ತನ್ನ ನಿವಾಸದಲ್ಲಿ ಮಂಗಳವಾರ ರಾತ್ರಿ ಕುಸಿದು ಬಿದ್ದಿದ್ದು, ಅವರನ್ನು ಜುಹುವಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವಿಚಾರವನ್ನು ಅವರ ಗೆಳೆಯ ಹಾಗೂ ಅವರ ಕಾನೂನು ಸಲಹೆಗಾರ ಲಲಿತ್ ಬಿಂದಲ್ ಖಚಿತಪಡಿಸಿದ್ದಾರೆ.
ತಡರಾತ್ರಿ ಗೋವಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ಸಂದರ್ಭದಲ್ಲಿ ಎಮರ್ಜೆನ್ಸಿ ವಾರ್ಡ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಅವರಿಗೆ ಹಲವು ಪರೀಕ್ಷೆಗಳನ್ನು ಮಾಡಲಾಗಿದ್ದು, ಅವುಗಳ ವರದಿ ಇನ್ನಷ್ಟೇ ಬರಬೇಕಿದೆ. ಗೋವಿಂದ ಪ್ರಜ್ಞೆತಪ್ಪಲು ಕಾರಣ ಇನ್ನೂ ಬಹಿರಂಗವಾಗಿಲ್ಲ. ಪರೀಕ್ಷಾ ವರದಿ ಬಂದ ಬಳಿಕ ಈ ವಿಚಾರ ತಿಳಿಯಲಿದೆ.
ಹಿರಿಯ ಧರ್ಮೇಂದ್ರ ಬ್ರೀಚ್‌ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸೋಮವಾರ ಗೋವಿಂದ ಅವರು ಧರ್ಮೇಂದ್ರ ದಾಖಲಾದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ, ಕುಟುಂಬದವರಿಗೆ ಧೈರ್ಯ ತುಂಬಿ ಬಂದಿದ್ದರು. ಈ ಸಂದರ್ಭದಲ್ಲಿ ಗೋವಿಂದ ಅವರು ಭಾವುಕರಾಗಿದ್ದರು. ರಾತ್ರಿ ಸ್ವತಹ ಗೋಮವಿಂದ ಅಸ್ವಸ್ಥರಾಗಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್, ಆರ್ಯನ್ ಖಾನ್ ಸೇರಿದಂತೆ ಅನೇಕರು ಧರ್ಮೇಂದ್ರ ಆರೋಗ್ಯ ವಿಚಾರಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಗೋವಿಂದ ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿತ್ತು. ತಮ್ಮ ರಿವಾಲ್ವರ್ನಿಂದ ಮಿಸ್ ಫೈಯರ್ ಆದ ಬುಲೆಟ್ ಅವರ ಕಾಲಿಗೆ ಹೊಡೆದಿತ್ತು. ಇದರಿಂದ ಅವರು ಆಸ್ಪತ್ರೆ ಸೇರಬೇಕಾಯಿತು. ಗೋವಿಂದ ಹಾಗೂ ಅವರ ಪತ್ನಿ ಸುನಿತಾ ಅಹುಜಾ ಸಂಬಂಧ ಹದಗೆಟ್ಟಿದೆ. ಇವರು ಶೀಘ್ರವೇ ವಿಚ್ಛೇದನ ಪಡೆಯುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
























