ಒಂಬತ್ತು ಎಕ್ಸಿಟ್ ಪೋಲ್ಗಳಲ್ಲಿ ಎನ್ಡಿಎಗೆ ಬಹುಮತದ ಭವಿಷ್ಯ
ನವದೆಹಲಿ: ಬಿಹಾರದ ಮತದಾರ ಮತ್ತೊಮ್ಮೆ ಎನ್ಡಿಎ ಮೈತ್ರಿಕೂಟಕ್ಕೆ ಜೈ ಎಂದಿದ್ದಾನೆ ಎಂದಿವೆ ಎಲ್ಲ ಸಮೀಕ್ಷೆಗಳು. ಬಿಹಾರ ವಿಧಾನಸಭೆಗೆ ಮಂಗಳವಾರ ಎರಡನೇ ಹಂತದ ಮತದಾನ ಮುಕ್ತಾಯವಾದ ಬೆನ್ನಿಗೆ ಹಲವು ಚುನಾವಣೋತ್ತರ ಸಮೀಕ್ಷೆಗಳು ಸಂಭವನೀಯ ಫಲಿತಾಂಶವನ್ನು ಪ್ರಕಟಿಸಿವೆ. ಈ ಪೈಕಿ ಒಂಬತ್ತು ಸಮೀಕ್ಷೆಗಳು ಈ ಸಲವೂ ಬಿಜೆಪಿ-ಜೆಡಿಯು ಒಳಗೊಂಡಿರುವ ಎನ್ಡಿಎ ಮೈತ್ರಿಕೂಟವೆ ನಿಚ್ಚಳ ಬಹುಮತದೊಂದಿಗೆ ಮರಳಿ ಗದ್ದುಗೆ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ.
ಆದರೆ ಚುನಾವಣೋತ್ತರ ಸಮೀಕ್ಷೆಗಳು ಹೇಳಿದ ಭವಿಷ್ಯಗಳು ಸುಳ್ಳಾಗುವ ಸಾಧ್ಯತೆ ಇದೆ. ಕಳೆದ ಲೋಕಸಭೆ ಚುನಾವಣೆಯಿಂದ ಹಿಡಿದು ನಂತರ ನಡೆದ ಹಲವು ವಿಧಾನಸಭೆ ಚುನಾವಣೆಗಳಲ್ಲಿ ಸಮೀಕ್ಷೆಗಳ ಲೆಕ್ಕಾಚಾರ ಬುಡಮೇಲಾಗಿದೆ. ಹೀಗಾಗಿ ಬಿಹಾರದ ಕುರಿತು ಹೇಳಿರುವ ಭವಿಷ್ಯದ ಮೇಲೂ ಒಂದಷ್ಟು ಅಪನಂಬಿಕೆ ಇದ್ದೇ ಇದೆ. ಆದರೆ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಎನ್ಡಿಎ ಮತ್ತು ಆರ್ಜೆಡಿ, ಕಾಂಗ್ರೆಸ್ ಒಳಗೊಂಡಿರುವ ಮಹಾಘಟಬಂಧನ್ ಹೊಂದಿವೆ.
ಬಿಹಾರದಲ್ಲಿ 2 ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ನ.14ಕ್ಕೆ ಮತ ಎಣಿಕೆ ನಡೆಯಲಿದೆ. ಮೊದಲ ಹಂತದ ಮತದಾನ ನವೆಂಬರ್ 6ರಂದು ನಡೆದಿದ್ದರೆ ಎರಡನೇ ಹಂತದ ಮತದಾನ ನಿನ್ನೆ ಮುಕ್ತಾಯವಾಗಿದೆ. ಈ ಬಾರಿ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಇದರಲ್ಲಿ ಯಾವ ಮೈತ್ರಿಕೂಟ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಕಲ್ಪನೆಯನ್ನು ನೀಡಲು ಚನಾವಣೋತ್ತರ ಸಮೀಕ್ಷೆಗಳು ಸಹಾಯ ಮಾಡುತ್ತವೆ.
ಬಿಹಾರದಲ್ಲಿ ಮೊದಲ ಹಂತದಲ್ಲಿ 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, ಎರಡನೇ ಹಂತದಲ್ಲಿ 20 ಜಿಲ್ಲೆಗಳ 122 ಸ್ಥಾನಗಳಿಗೆ ಮತದಾನ ನಡೆಯಿತು. ಚುನಾವಣಾ ಫಲಿತಾಂಶ ನವೆಂಬರ್ 14ರಂದು ಹೊರಬೀಳಲಿದೆ. ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಈ ಬಾರಿ ಸ್ಪಷ್ಟ ಮುನ್ನಡೆಯನ್ನು ಸಾಧಿಸಲಿವೆ ಎಂದು ಭವಿಷ್ಯ ನುಡಿದಿವೆ. ತೀವ್ರ ಪೈಪೋಟಿಯಿಂದ ಕೂಡಿರುವ ಈ ಸಮೀಕ್ಷೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಬಣ ಎನ್ಡಿಎಗಿಂತ ಹಿಂದುಳಿದಿದೆ.
ಯಾವ ಸಮೀಕ್ಷೆ ಏನು ಹೇಳಿದೆ?:
ಪೀಪಲ್ಸ್ ಪಲ್ಸ್ ಸಮೀಕ್ಷೆ
ಎನ್ಡಿಎ: 133-159 ಮಹಾಘಟಬಂಧನ್: 75-101 ಜನ್ ಸುರಾಜ್: 0-5 ಇತರರು: 2-8
ಪೀಪಲ್ಸ್ ಇನ್ಸೈಟ್ ಸಮೀಕ್ಷೆ
ಎನ್ಡಿಎ: 133-148
ಮಹಾಘಟಬಂಧನ್: 87-102
ಮ್ಯಾಟ್ರಿಜ್ ಸಮೀಕ್ಷೆ
ಎನ್ಡಿಎ: 147-167
ಮಹಾಘಟಬಂಧನ್: 70-90
ಜೆವಿಸಿ ಸಮೀಕ್ಷೆ
ಎನ್ಡಿಎ: 135-140
ಮಹಾಘಟಬಂಧನ್: 88-103
ದೈನಿಕ್ ಭಾಸ್ಕರ್ ಸಮೀಕ್ಷೆ
ಎನ್ಡಿಎ: 145-160
ಮಹಾಘಟಬಂಧನ್: 73-91
ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆ
ಎನ್ಡಿಎ: 130-138
ಮಹಾಘಟಬಂಧನ್: 100-108
ಇತರರು: 3-5
2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸ್ಪರ್ಧಿಸಿದ 115 ಕ್ಷೇತ್ರಗಳಲ್ಲಿ ಕೇವಲ 43 ಸ್ಥಾನಗಳನ್ನು ಗೆದ್ದಿತ್ತು. 2015ರ ಬಿಹಾರ ಚುನಾವಣೆಯಲ್ಲಿ, ಜೆಡಿಯು 71 ಸ್ಥಾನಗಳನ್ನು ಗೆದ್ದಿತ್ತು. 2020ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಬಿಹಾರದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಗ ಅದು 75 ಸ್ಥಾನಗಳನ್ನು ಗೆದ್ದಿತ್ತು.
























