ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಸಮಿತಿ ರಚನೆ ಮಾಡುವುದಕ್ಕೂ ಮುಂದಾಗಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಬಗ್ಗೆ ಇಂದು ಜೈಲಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು, ನಡೆದಿದೆ ಎನ್ನಲಾದ ಲೋಪಗಳ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆರ್. ಹಿತೇಂದ್ರ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿ ತಿಳಿಸಿದ್ದಾರೆ.
ಸಮಿತಿಯಲ್ಲಿ ಪೊಲೀಸ್ ಮಹಾನಿರ್ದೇಶಕ ಸಂದೀಪ್ ಪಾಟೀಲ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಾದ ಅಮರನಾಥ ರೆಡ್ಡಿ ಮತ್ತು ಸಿ.ಬಿ. ರಿಷ್ಯಂತ್ ಸದಸ್ಯರಾಗಿದ್ದಾರೆ. ರಾಜ್ಯದಲ್ಲಿ ಪ್ರಮುಖ ಕಾರಾಗೃಹಗಳು ಇರುವ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಮಿತಿಯ ಸಹ-ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಕೆ. ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಸೂಪರಿಂಟೆಂಡೆಂಟ್ ಇಮಾಮ್‌ಸಾಬ್ ಮೈಗೇರಿ ಮತ್ತು ಸಹಾಯಕ ಸೂಪರಿಂಟೆಂಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿದೆ. ಇನ್ನು ಮುಂದೆ ಪರಪ್ಪನ ಅಗ್ರಹಾರ ಜೈಲಿನ ಉಸ್ತುವಾರಿಯನ್ನು ಐಪಿಎಸ್ ಅಧಿಕಾರಿಯೊಬ್ಬರು ವಹಿಸಿಕೊಳ್ಳಬೇಕೆಂದು ನಿರ್ಧರಿಸಲಾಗಿದೆ. ಜೈಲಿನಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಸಂಪರ್ಕಿಸುವ ಕಮಾಂಡ್ ಸೆಂಟರ್ ಅನ್ನು ಸ್ಥಾಪಿಸಲಾಗುವುದಾಗಿ ಗೃಹಸಚಿವರು ತಿಳಿಸಿದ್ದಾರೆ.
























