13ರ ಹರೆಯದ ಬಾಲಕನ ಮೇಲೆ ಸಹಪಾಠಿಗಳಿಂದ ಬರ್ಬರ ಹಲ್ಲೆ
ಮೈಸೂರು : ಮೈಸೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ವಿದ್ಯಾರ್ಥಿಯ ಮೇಲೆ ನಡೆದ ರ್ಯಾಗಿಂಗ್ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ಮತ್ತು ರ್ಯಾಗಿಂಗ್ ನಡೆಸಿದ ಬಾಲಕರು ಮತ್ತು ಶಾಲೆಯ ಆಡಳಿತ ಮಂಡಳಿ ವಿರುದ್ಧ ಕೇಸ್ದಾಖಲಿಸಿಕೊಂಡಿದೆ.
ವಿದ್ಯಾರ್ಥಿಯೊಬ್ಬನ ಮೇಲೆ ಕೆಲವು ಹುಡುಗರು ಸೇರಿಕೊಂಡು ಬರ್ಬರವಾಗಿ ರ್ಯಾಗಿಂಗ್ ಮಾಡಿದ ಘಟನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹಲ್ಲೆಗೊಳಗಾದ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ. ಮೈಸೂರಿನ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಶಾಲಾ ಆಡಳಿತ ಮಂಡಳಿ ಹಾಗೂ ಮೂವರು ಬಾಲಕರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
13 ವರ್ಷದ ಬಾಲಕನ ಮೇಲೆ ಮೂವರಿಂದ ಹಲ್ಲೆ ನಡೆದಿದ್ದು, ಬಾಲಕನ ಮರ್ಮಾಂಗಕ್ಕೆ ಮೂವರು ಬಾಲಕರು ಒದ್ದಿದ್ದಾರೆ. ಹಲ್ಲೆಯಿಂದ ಬಾಲಕನ ಮರ್ಮಾಂಗಕ್ಕೆ ಗಂಭೀರವಾದ ಗಾಯಗಳಾಗಿವೆ. ಎಂಟನೇ ತರಗತಿಗೆ ಬಾಲಕ ಕ್ಲಾಸ್ ಲೀಡರ್ ಆಗಿದ್ದ. ಮೂವರು ಬಾಲಕರು ಇವನನ್ನು ಪ್ರತಿನಿತ್ಯ ಹಣ ಕೊಡು, ಮೊಬೈಲ್ ತೆಗೆದುಕೊಂಡು ಬಾ, ನಾವು ಹೇಳಿದ ಹಾಗೆ ಕೇಳು ಎಂದು ಪೀಡಿಸುತ್ತಿದ್ದರು. ಅಕ್ಟೋಬರ್ 25ರಂದು ಬಾಲಕನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಶೌಚಾಲಯದಲ್ಲಿ ಬಾಲಕನ ಮರ್ಮಾಂಗಕ್ಕೆ ಒದ್ದಿದ್ದಾರೆ. ಬಾಲಕನ ಸ್ಥಿತಿ ಕಂಡು ಪೋಷಕರು ಹೌಹಾರಿದ್ದಾರೆ.
ಈ ವಿಚಾರವಾಗಿ ಬಾಲಕ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾಗ ನಾನು ಶೌಚಾಲಯಕ್ಕೆ ಹೋದೆ. ಶೌಚಾಲಯದಲ್ಲಿ, ಶಿಕ್ಷಕರಿಗೆ ನಮ್ಮ ಬಗ್ಗೆ ಕಂಪ್ಲೇಂಟ್ ಮಾಡುತ್ತೀಯಾ ಅಂತ ಹೇಳಿ ಒದ್ದಿದ್ದಾರೆ. ಶಿಕ್ಷಕರಿಗೆ ನಮ್ಮ ತಾಯಿ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 3000 ರೂ. ದುಡ್ಡು ಹಾಗೂ ಮೊಬೈಲ್ ಕಸಿದುಕೊಂಡಿದ್ದಾರೆ. ನನ್ನನ್ನು ಕ್ಲಾಸ್ ಲೀಡರ್ ಮಾಡಿದಾಗ ಅವರ ಮೇಲೆ ಶಿಕ್ಷಕರಿಗೆ ದೂರು ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಬಾಲಕ ತಿಳಿಸಿದ್ದಾನೆ.
























