ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಡು
ನವದೆಹಲಿ : ರಾಷ್ಟ್ರಗೀತೆಯಷ್ಟೇ ಮನ್ನಣೆ ಹೊಂದಿರುವ ಭಾರತದ ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ಇಂದು 150ನೇ ವರ್ಷಾಚರಣೆಯ ಸಂಭ್ರಮ. ವಂದೇ ಮಾತರಂ 150ನೇ ವರ್ಷಾಚರಣೆ ನಿಮಿತ್ತ ಇಂದು ದೇಶಾದ್ಯಂತ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಅದರಲ್ಲಿ 150 ಕಡೆಗಳಲ್ಲಿ ವಂದೇ ಮಾತರಂ ಹಾಡುವುದು ಸೇರಿದೆ. ದಿಲ್ಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ.
ಹಲವು ಪೀಳಿಗೆಯ ಭಾರತೀಯರು ಒಂದಾಗಲು, ಎದ್ದುನಿಲ್ಲಲು ಮತ್ತು ರಾಷ್ಟ್ರದ ಚೈತನ್ಯವನ್ನು ಬಲಪಡಿಸಲು ಪ್ರೇರೇಪಿಸಿದ ಹಾಡು ವಂದೇ ಮಾತರಂ. ಖ್ಯಾತ ಬಂಗಾಳಿ ಕವಿ ಮತ್ತು ಕಾದಂಬರಿಕಾರ ಬಂಕಿಮ್ ಚಂದ್ರ ಚಟರ್ಜಿ ಬರೆದ ವಂದೇ ಮಾತರಂ ಭಾರತದ ಜಾಗೃತಿಯ ಸಂಕೇತವಾಗಿ ನಿಂತಿದೆ.
ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯು ವಿರುದ್ಧ ಹೋರಾಡಲು ಜನರನ್ನು ಪ್ರೇರೇಪಿಸಿದ ಹಾಡು ವಂದೇ ಮಾತರಂ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿತ್ತು. ವಂದೇ ಮಾತರಂ ಸ್ವಾತಂತ್ರ್ಯ ಹೋರಾಟಗಾರರ ಘೋಷಣೆ, ಮಾತೃಭೂಮಿಯ ಮೇಲಿನ ಪ್ರೀತಿ ಮತ್ತು ಭಕ್ತಿಯ ಸಂಕೇತವಾಯಿತು. ನಂತರ ವಿದೇಶಿ ಶಕ್ತಿಯ ವಿರುದ್ಧದ ಪ್ರತಿರೋಧದ ಘೋಷಣೆಯಾಯಿತು. ವಂದೇ ಮಾತರಂ ಹಾಡನ್ನು ಸಭೆಗಳು, ಮೆರವಣಿಗೆಗಳು ಮತ್ತು ದೊಡ್ಡ ಸಾರ್ವಜನಿಕ ಸಭೆಗಳಲ್ಲಿ ಹಾಡಾಗಿ ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟಗಾರರ ಮತ್ತು ದೇಶಭಕ್ತರ ಘೋಷಣೆಯಾಗಿಯೂ ಬಳಸಲಾಗುತ್ತಿತ್ತು.
ಶುಕ್ರವಾರ ಪ್ರತಿಯೊಬ್ಬ ಭಾರತೀಯನಿಗೂ ಒಂದು ಸ್ಮರಣೀಯ ದಿನ. ನಾವು ವಂದೇ ಮಾತರಂನ 150 ವೈಭವದ ವರ್ಷಗಳನ್ನು ಆಚರಿಸಲಿದ್ದೇವೆ. ಇದು ಹಲವು ಪೀಳಿಗೆಗೆ ಸ್ಫೂರ್ತಿ ನೀಡಿದ ಮತ್ತು ನಮ್ಮ ದೇಶದಾದ್ಯಂತ ದೇಶಭಕ್ತಿಯ ಅವಿನಾಶಿ ಚೈತನ್ಯವನ್ನು ಹೊತ್ತಿಸಿದ ಒಂದು ಪ್ರೇರಕ ಗೀತೆಯಾಗಿದೆ. ಈ ಸಂದರ್ಭದ ಪ್ರಯುಕ್ತ ನಾನುಬೆಳಗ್ಗೆ 9.30ಕ್ಕೆ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ಇದರ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಸಹ ಬಿಡುಗಡೆ ಮಾಡಲಾಗುವುದು. ಈ ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ವಂದೇ ಮಾತರಂನ ಸಾಮೂಹಿಕ ವಾಚನ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
1896ರಲ್ಲಿ ರವೀಂದ್ರನಾಥ ಠಾಗೋರ್ ಈ ಸುಮಧುರ ಕವಿತೆಯನ್ನು ಮೊದಲ ಬಾರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಕೋಲ್ಕತ್ತಾ ಅಧಿವೇಶನದಲ್ಲಿ ಹಾಡಿದರು. 1950ರ ಜನವರಿ 24ರಂದು ಭಾರತದ ಸಂವಿಧಾನ ಸಭೆಯು ಅಧಿಕೃತವಾಗಿ ರಾಷ್ಟ್ರೀಯ ಗೀತೆಯಾಗಿ ಇದನ್ನು ಅಂಗೀಕರಿಸಿದ ನಂತರ ಅಂದಿನ ಸಂವಿಧಾನ ಸಭೆಯ ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಅವರು ವಂದೇ ಮಾತರಂ ಅನ್ನು ರಾಷ್ಟ್ರಗೀತೆಯಾದ ಜನ ಗಣ ಮನದೊಂದಿಗೆ ಸಮಾನವಾಗಿ ಗೌರವಿಸಬೇಕೆಂದು ಘೋಷಿಸಿದರು.
























