ನ.28ರಂದು ಪ್ರಧಾನಿಯಿಂದ ಸುವರ್ಣ ತೀರ್ಥ ಮಂಟಪ, ಚಿನ್ನದ ಕನಕನ ಕಿಂಡಿ, ಕನಕ ಕವಚ ಉದ್ಘಾಟನೆ
ಉಡುಪಿ : ನ.28ರಂದು ಉಡುಪಿಗೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಿ ಶ್ಲೋಕ ಪಠಿಸಲಿದ್ದಾರೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ನವೆಂಬರ್ 8ರಿಂದ ಡಿಸೆಂಬರ್ 7ರವರೆಗೆ ಭವ್ಯವಾದ ಗೀತೋತ್ಸವವನ್ನು ಆಚರಿಸಲಾಗುವುದು. ಈ ಕಾರ್ಯಕ್ರಮವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಪ್ರತಿದಿನ ವಿದ್ವಾಂಸರಿಂದ ಗೀತಾ ಪಾರಾಯಣ ನಡೆಯಲಿದ್ದು, ನವೆಂಬರ್ 28ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಲಕ್ಷಕಂಠ ಗೀತಾ ಪಾರಾಯಣ ಆರಂಭವಾಗಲಿದ್ದು, ನಂತರ ಶ್ರೀ ಕೃಷ್ಣನಿಗೆ ಗೀತಾರ್ಪಣೆ ನಡೆಯಲಿದೆ ಎಂದು ಹೇಳಿದರು.
ನವೆಂಬರ್ 28 ರಂದು ಪ್ರಧಾನಿಯವರು ಸುವರ್ಣ ತೀರ್ಥ ಮಂಟಪ, ಚಿನ್ನದಿಂದ ಮಾಡಿದ ಕನಕನ ಕಿಂಡಿ ಮತ್ತು ಕನಕ ಕವಚವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ನಂತರ, ಪ್ರಧಾನಿ ನರೇಂದ್ರ ಮೋದಿ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಿ ಶ್ಲೋಕಗಳನ್ನು ಪಠಿಸಲಿದ್ದಾರೆ. ಶ್ರೀಕೃಷ್ಣ ಮಠದ ಸುತ್ತಮುತ್ತ ಭಕ್ತರಿಂದ ಸಾಮೂಹಿಕವಾಗಿ ಗೀತಾ ಪಾರಾಯಣ ನಡೆಯಲಿದೆ.
ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಔಪಚಾರಿಕ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಮತ್ತು ವೇದಿಕೆಯಲ್ಲಿ ಪಾರಾಯಣ ಪಠಣದಲ್ಲಿ ಭಾಗವಹಿಸಲಿದ್ದಾರೆ.
ನವೆಂಬರ್ 29ರಂದು ಭಗವದ್ಗೀತೆ ಮಹಾಯಾಗ ನಡೆಯಲಿದೆ. ನವೆಂಬರ್ 30ರಂದು ಸಂತ್ ಸಂಗಮ ಮತ್ತು ಭಜನಾೋತ್ಸವ ನಡೆಯಲಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
























