ಬುಧವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಅಭಿಷೇಕ್ ಆಳ್ವ
ಉಡುಪಿ: ಕಂಬಳ ಸಂಘಟಕ ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ ಅವರ ಪುತ್ರ ಉದ್ಯಮಿ ಅಭಿಷೇಕ್ ಆಳ್ವ (29) ಅವರ ಮೃತದೇಹ ಶುಕ್ರವಾರ ಮುಂಜಾನೆ ಕಾಪು ತಾಲೂಕಿನ ಹೆಜಮಾಡಿ ಸಮೀಪ ಶಾಂಭ ವಿ ನದಿ ಕಿನಾರೆಯಲ್ಲಿ ಕಂಡುಬಂದಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.
ತಂದೆಯಂತೇ ಅಭಿಷೇಕ್ ಆಳ್ವ ಕೂಡ ಕಂಬಳ ಪ್ರೇಮಿಯಾಗಿದ್ದು, ಜೊತೆಗೆ ತಂದೆಯ ಉದ್ಯಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ವಾಮಂಜೂರು ತಿರುವೈಲು ಕಂಬಳ ಬಹಳ ಪ್ರಸಿದ್ಧವಾಗಿದ್ದು, ಇದನ್ನು ಸಂಘಟಿಸಲು ಅಭಿಷೇಕ್ ಆಳ್ವ ಅವರೂ ಅಪಾರ ಶ್ರಮ ವಹಿಸುತ್ತಿದ್ದರು.
ಬುಧವಾರ ರಾತ್ರಿ ಸ್ನೇಹಿತರ ಜೊತೆಗಿದ್ದ ಅಭಿಷೇಕ್ ಆಳ್ವ ರಾತ್ರಿ ಅವರ ಜೊತೆಗೆ ಊಟ ಮಾಡಿ ಹೋದವರು ಬಳಿಕ ನಾಪತ್ತೆಯಾಗಿದ್ದರು. ಗುರುವಾರ ಸಂಜೆ ಅವರ ಕಾರು ಮೂಲ್ಕಿ ಬಪ್ಪನಾಡು ಸೇತುವೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆ ಪರಿಸರದಲ್ಲಿ ಅವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಇಂದು ಮುಂಜಾನೆ ಅವರ ಶವ ಪಡುಬಿದ್ರಿ ಸಮೀಪ ಶಾಂಭವಿ ನದಿ ಕಿನಾರೆಯಲ್ಲಿ ಪತ್ತೆಯಾಗಿದೆ.
























