ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಳ್ಳಲಾಗಿದ್ದ ಕಾರು
ಚಿಕ್ಕಮಗಳೂರು : ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸರು ವಶಪಡಿಸಿಕೊಂಡು ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದ ಕಾರಿನಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಒಡವೆ ಮತ್ತು ಹಣ ಪತ್ತೆಯಾಗಿರುವ ಘಟನೆ ಕೊಪ್ಪದಲ್ಲಿ ನಡೆದಿದೆ. ವಿಶೇಷವೆಂದರೆ ಈ ಕಾರು ಒಂದು ತಿಂಗಳಿಂದ ಪೊಲೀಸ್ ಠಾಣೆಯ ಆವರಣದಲ್ಲಿತ್ತು.
ಮಾಜಿ ಶಿಕ್ಷಣ ಸಚಿವ ದಿ.ಗೋವಿಂದೇಗೌಡರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ನೇಪಾಳಿ ಗ್ಯಾಂಗನ್ನು ಸಾಂಗ್ಲಿ ಪೊಲೀಸರ ನೆರವಿನಿಂದ ಕೊಪ್ಪದ ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿಗಳು ಎಸ್ಕೇಪ್ ಆಗಲು ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು. ನ್ಯಾಯಾಲಯ ಈ ಕಾರನ್ನು ರಿಲೀಸ್ ಮಾಡುವಂತೆ ಆದೇಶಿಸಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಕಾರನ್ನು ಪರಿಶೀಲಿಸುವಾಗ ಹಣ, ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದೆ.
ಪರಿಶೀಲನೆ ವೇಳೆ ಕಾರಿನ ಸೀಟಿನ ಅಡಿಯಲ್ಲಿ 595 ಗ್ರಾಂ ಚಿನ್ನ, 589 ಗ್ರಾಂ ಬೆಳ್ಳಿ, 3,41,150 ರೂ. ನಗದು ಪತ್ತೆಯಾಗಿದೆ. ವಶಕ್ಕೆ ಪಡೆಯಲಾದ ಹಣ ಮತ್ತು ವಸ್ತುಗಳ ಮೌಲ್ಯ ಕೋಟಿಗೂ ಅಧಿಕ ಎನ್ನಲಾಗಿದ್ದು, ಕಳ್ಳತನವಾಗಿದ್ದ ಮೌಲ್ಯಕ್ಕಿಂತ ಅಧಿಕ ಚಿನ್ನ ಮತ್ತು ಬೆಳ್ಳಿ ಈ ವೇಳೆ ಪತ್ತೆಯಾಗಿದೆ. ಹೀಗಾಗಿ ಗ್ಯಾಂಗ್ ಇನ್ನೂ ಹಲವೆಡೆ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಆ.21ರಂದು ಬೆಳಗಿನ ಜಾವ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹರಂದೂರು ಗ್ರಾಮದ ಮಣಿಪುರದಲ್ಲಿ ಮಾಜಿ ಸಚಿವ ಗೋವಿಂದೇ ಗೌಡ ಅವರ ಪುತ್ರ ಹಾಗೂ ಎಸ್ಟೇಟ್ ಮಾಲೀಕ ಎಚ್.ಜಿ. ವೆಂಕಟೇಶ್ ಮನೆಯಲ್ಲಿ ಕಳ್ಳತನ ನಡೆದಿತ್ತು. 6 ಲಕ್ಷ ನಗದು ಮತ್ತು 37,50,000 ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕದ್ದು ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಆರೋಪಿಗಳಿಗೆ ಬಲೆ ಬೀಸಿದ್ದ ಪೊಲೀಸರು, ಸಾಂಗ್ಲಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ನೇಪಾಳದ ರಾಜೇಂದ್ರ, ಏಕೇಂದ್ರ ಕುಟಲ್ ಬದ್ವಾಲ್, ಕರಂ ಸಿಂಗ್ ಬಹಾದ್ದೂರ್ ಎಂಬವರನ್ನು ಅರೆಸ್ಟ್ ಮಾಡಿ ಒಂದೂವರೆ ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನ ಜಪ್ತಿ ಮಾಡಿದ್ದರು.
























