ಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಹರಕೆಯ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ನವೆಂಬರ್ 4ರ ರಾತ್ರಿ 8ರ ಸುಮಾರಿಗೆ ಸುಳ್ಯಕ್ಕೆ ಪುರಪ್ರವೇಶ ಮಾಡಿತು.
ನವೆಂಬರ್ 3ರ ರಾತ್ರಿ 8ಕ್ಕೆ ಉಡುಪಿ ಜಿಲ್ಲಾ ಕುಂಭಾಶಿಯ ರಾಜಗೋಪಾಲಾಚಾರ್ಯ ಅವರ ವಿಶ್ವಕರ್ಮ ಕರಕುಶಲ ಮತ್ತು ಶಿಲ್ಪಕಲಾ ಕೇಂದ್ರದಲ್ಲಿ ಕುತ್ತಿ ಪೂಜೆಗೊಂಡು ಡಾಕ್ಟರ್ ರೇಣುಕಾಪ್ರಸಾದ್ ಮತ್ತು ಅವರ ಕುಟುಂಬದವರಿಗೆ ಹಸ್ತಾಂತರಿಸಲ್ಪಟ್ಟ ಬೆಳ್ಳಿರಥ ನವೆಂಬರ್ 4ರಂದು ಬೆಳಿಗ್ಗೆ 8ಕ್ಕೆ ಅಲ್ಲಿಂದ ಯಾತ್ರೆ ಆರಂಭಿಸಿತ್ತು.
ಕೋಟೇಶ್ವರದ ಕೋಟಿಲಿಂಗೇಶ್ವರನ ಸನ್ನಿಧಿಯಲ್ಲಿ ಪೂಜೆಗೊಂಡ ರಥ ಬಳಿಕ ಉಡುಪಿ-ಮಂಗಳೂರು ಮಾರ್ಗವಾಗಿ ಸುಳ್ಯಕ್ಕೆ ಬಂದಿತ್ತು. ಸಾಗಿ ಬಂದ ಮಾರ್ಗದಲ್ಲಿ ಗಣ್ಯರಾದ ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ Jc. ಸುಕುಮಾರ್ ವೈ., ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಎರ್ಮಾಳ್, ಉಚ್ಚಿಲ ಮಹಾಲಕ್ಷ್ಮಿ ದೇವಳದ ಅಧ್ಯಕ್ಷ ಗಿರಿಧರ್, ಮಂಗಳೂರು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಗೌಡ ಸಂಘದ ಕಿರಣ್ ಬುಡ್ಲೆಗುತ್ತು, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಸಂಜೀವ ಮಠಂದೂರು ಮುಂತಾದವರು ರಥಕ್ಕೆ ಪುಷ್ಪಾರ್ಚನೆಗೈದಿದ್ದರು. ಡಾಕ್ಟರ್ ಕೆ. ವಿ. ರೇಣುಕಾಪ್ರಸಾದ್, ಅವರ ಪತ್ನಿ ಡಾಕ್ಟರ್ ಜ್ಯೋತಿ ಆರ್. ಪ್ರಸಾದ್, ಮಗ ಮೌರ್ಯ ಆರ್. ಪ್ರಸಾದ್, ಮಗಳು ಅಭಿಜ್ಞಾ ಗೌತಮ್ ಮತ್ತು ಗೌತಮ್, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್’ನ ಸಂಸ್ಥೆಗಳ ಉದ್ಯೋಗಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು, ಸಾರ್ವಜನಿಕರು ಮತ್ತು ದಿವಂಗತ ಕುರುಂಜಿ ವೆಂಕಟ್ರಮಣ ಗೌಡರ ಅಭಿಮಾನಿ ವರ್ಗದವರು ಹಾಗೂ ಭಕ್ತಾಭಿಮಾನಿಗಳು ರಥದ ಜೊತೆಗಿದ್ದರು.
























