ಶ್ರೀ ತತ್ವಮಸಿ ಹೆಸರಿನಲ್ಲಿ ಸಂಸ್ಥೆ ತೆರೆದು ಕೋಟಿಗಟ್ಟಲೆ ರೂ. ಗುಳುಂ ಮಾಡಿದ ಪ್ರಕರಣ
ಸುಳ್ಯ : ಸುಳ್ಯದಲ್ಲಿ ಶ್ರೀ ತತ್ವಮಸಿ ಚಾರಿಟೇಬಲ್ ಟ್ರಸ್ಟ್ (ಆರ್) ಮತ್ತು ಶ್ರೀ ತತ್ವಮಸಿ ಎಂಟರ್ಪ್ರೈಸಸ್ (ಆರ್) ಹೆಸರಿನಲ್ಲಿ ‘ಬೆನಿಫಿಟ್ ಸ್ಕೀಮ್’ ಮೂಲಕ ಸಾರ್ವಜನಿಕರನ್ನು ವಂಚಿಸಿದ ಆರೋಪದ ಮೇಲೆ ಮೂವರು ವ್ಯಕ್ತಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದ ಅಪರಾಧಿಗಳನ್ನು ಕೆ.ಪಿ. ಗಣೇಶ್, ಗೀತಾ ಕೆ.ಎಸ್. ಮತ್ತು ಭಾರತಿ ಎಂದು ಗುರುತಿಸಲಾಗಿದೆ.
ಕೆ.ಪಿ. ಕೃಷ್ಣಪ್ಪ ಗೌಡ, ಗೀತಾ ಗಣೇಶ್, ಎನ್.ಇ.ವೈ. ಕಮಲಾಕ್ಷ ಮತ್ತು ಕೆ. ನಾಗೇಶ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ. ಶಿವಪ್ರಕಾಶ್ ಎಂಬವರ ಮರಣದ ನಂತರ ಅವರ ವಿರುದ್ಧದ ಪ್ರಕರಣವನ್ನು ಮುಚ್ಚಲಾಯಿತು.
2013ರಲ್ಲಿ ಆರೋಪಿಗಳು ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ವೃತ್ತದ ಅಂಬಡಡ್ಕ ಬಳಿಯ ಸಮೃದ್ಧಿ ಸಂಕೀರ್ಣದಲ್ಲಿ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಈ ಸಂಸ್ಥೆಗಳ ಪರವಾಗಿ ಅವರು ಸುಳ್ಯದ ಗಾಂಧಿನಗರದಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ತೆರೆದು ವಿವಿಧ ಯೋಜನೆಗಳನ್ನು ಪ್ರಾರಂಭಿಸಿದ್ದರು. ಏಜೆಂಟರ ಮೂಲಕ ಸಾವಿರಾರು ಜನರನ್ನು ಸದಸ್ಯರನ್ನಾಗಿ ನೋಂದಾಯಿಸಿ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಿದ್ದರು.
ಯೋಜನೆಯ ಸದಸ್ಯರಿಗೆ ಭರವಸೆ ನೀಡಿದ ಯಾವುದೇ ಪ್ರತಿಫಲ ಅಥವಾ ವಸ್ತುಗಳನ್ನು ಒದಗಿಸದೆ ಆರೋಪಿಗಳು ಒಟ್ಟು 3,08,62,500 ರೂ.ಗಳನ್ನು ಗುಳುಂ ಮಾಡಿದ್ದರು. ವಂಚನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಎಂಟು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ಬಿ.ಮೋಹನ್ ಬಾಬು ಅವರ ಮುಂದೆ ವಿಚಾರಣೆ ನಡೆದಿದ್ದು, ಅಕ್ಟೋಬರ್ 30ರಂದು ಮೂವರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಲಾಗಿತ್ತು. ನವೆಂಬರ್ 3ರಂದು ನ್ಯಾಯಾಲಯವು ಅವರಿಗೆ ಐಪಿಸಿ ಸೆಕ್ಷನ್ 406 ಮತ್ತು 149 ರ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಐಪಿಸಿ ಸೆಕ್ಷನ್ 409 ಮತ್ತು 420 ಮತ್ತು 149ರ ಅಡಿಯಲ್ಲಿ ಹೆಚ್ಚುವರಿ ಮೂರು ವರ್ಷಗಳ ಸರಳ ಜೈಲು ಶಿಕ್ಷೆ ಮತ್ತು ತಲಾ 10,000 ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ, ಅವರು ಹೆಚ್ಚುವರಿಯಾಗಿ ಆರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
























