10 ಲಕ್ಷ ಲೀಟರ್ ಪೆಟ್ರೋಲ್ ಸ್ಫೋಟಿಸಿ ಮಹಾದುರಂತ; ಹಲವಾರು ಮನೆಗಳು ಬೆಂಕಿಗಾಹುತಿ
ವಾಷಿಂಗ್ಟನ್: ಅಮೆರಿಕದ ಕೆಂಟುಕಿಯ ಲೂಯಿಸ್‌ವಿಲ್ಲೆಯಲ್ಲಿರುವ ಏರ್‌ಪೋರ್ಟ್‌ನಿಂದ ಹೊರಟಿದ್ದ ಮೂವರಿದ್ದ ಸರಕು ಸಾಗಣೆ ವಿಮಾನವೊಂದು ಹಾರುವಾಗಲೇ ಅಪಘಾತಕ್ಕೀಡಾಗಿ ಸ್ಫೋಟಗೊಂಡಿದೆ. ದುರಂತದಲ್ಲಿ ಕನಿಷ್ಠ 7 ಮಂದಿ ಸಾವು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.
ವಿಮಾನಪತನಗೊಂಡ ಪ್ರದೇಶದ ಸುತ್ತ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಿಮ್ಮಿದೆ. ದುರಂತದಲ್ಲಿ ಹಲವಾರು ಮನೆಗಳು ಸುಟ್ಟು ನಾಶವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಘಟನೆ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ವಿಮಾನ ನಿಲ್ದಾಣವನ್ನ ಮುಚ್ಚಿದ್ದು, ಸುತ್ತಮುತ್ತ ಮನೆ ಕಳೆದುಕೊಂಡವರಿಗೆ ಆಶ್ರಯ ನೀಡುವಂತೆ ಸೂಚಿಸಿದ್ದಾರೆ.
ಹೊನೊಲುಲುಗೆ ತೆರಳುತ್ತಿದ್ದ ಮೆಕ್‌ಡೊನೆಲ್ ಡೌಗ್ಲಾಸ್ ಎಂಡಿ-11ಎಫ್ ವಿಮಾನವಾದ ಯುಪಿಎಸ್ ಫ್ಲೈಟ್-2976 ಮಂಗಳವಾರ ಸಂಜೆ ಸಂಜೆ 5.15ಕ್ಕೆ (ಸ್ಥಳೀಯ ಕಾಲಮಾನ) ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ವರದಿ ಮಾಡಿದೆ.
ವಿಮಾನ ಸ್ಫೋಟಗೊಂಡು ಪತನವಾಗಿ, ಮನೆಗಳು ಹೊತ್ತಿ ಉರಿಯುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಮೊದಲು ಎಡ ರೆಕ್ಕೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ. ನಂತರ ಇಡೀ ವಿಮಾನಕ್ಕೆ ಬೆಂಕಿ ವ್ಯಾಪಿಸಿದ್ದು, ನೆಲಕ್ಕಪ್ಪಳಿಸಿದೆ, ರನ್‌ವೇನಲ್ಲೇ ಉಜ್ಜಿಕೊಂಡು ಸ್ವಲ್ಪದೂರ ಮುಂದಕ್ಕೆ ಹೋಗಿದೆ. ಇದರಿಂದ ರನ್‌ವೇಯಿಂದಾಚೆಗಿದ್ದ ಕಟ್ಟಗಳಿಗೂ ಭಾರಿ ಹಾನಿಯಾಗಿದೆ.
ಲೂಯಿಸ್‌ವಿಲ್ಲೆ ಮೇಯರ್ ಕ್ರೇಗ್ ಗ್ರೀನ್ ಬರ್ಗ್ ಹೇಳುವಂತೆ, ಸರಕು ಸಾಗಣೆ ವಿಮಾನ ಜೆಟ್ ಇಂಧನವನ್ನು ಸಾಗಿಸುತ್ತಿತ್ತು. ಸ್ಫೋಟಗೊಂಡ ವೇಳೆ ವಿಮಾನದಲ್ಲಿ ಸುಮಾರು 2,80,000 ಗ್ಯಾಲನ್‌ನಷ್ಟು (10 ಲಕ್ಷ ಲೀಟರ್‌ಗೂ ಅಧಿಕ) ಇಂಧನ ಇತ್ತು. ಇದರಿಂದಾಗಿ ಬೆಂಕಿ ಭಾರಿ ಪ್ರಮಾಣದಲ್ಲಿ ವ್ಯಾಪಿಸಿದೆ ಎಂದು ವಿವರಿಸಿದ್ದಾರೆ.
ವಿಮಾನ ದುರಂತ ತಿಳಿಯುತ್ತಿದ್ದಂತೆ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿವೆ. ದಯವಿಟ್ಟು ಪೈಲಟ್‌ಗಳು, ಸಿಬ್ಬಂದಿ ಮತ್ತು ಬಾಧಿತರಾದ ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸಿ ಎಂದು ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
























