ಸುಳ್ಯ: ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗಣಕಯಂತ್ರಶಾಸ್ತ್ರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್’ನ ‘ಬಿ’ ಟೀಂನ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ತಮ್ಮ ಅಮೂಲ್ಯ ಶೈಕ್ಷಣಿಕ ಸೇವೆಯ ಬೆಳ್ಳಿಹಬ್ಬವನ್ನು ಪೂರೈಸಿದ್ದವರು ಡಾ. ಉಜ್ವಲ್ ಊರುಬೈಲ್ ಜಯಪ್ರಕಾಶ್.
ಕೊಡಗಿನ ಕೊಡುಗೆ
ಕೊಡಗು ಜಿಲ್ಲೆಯ ಚೆಂಬು ಗ್ರಾಮದ ಜನನಾಯಕರಾಗಿದ್ದ ಊರುಬೈಲು ದಿವಂಗತ ಜಯಪ್ರಕಾಶ್ – ಲೀಲಾವತಿ ದಂಪತಿಗಳ ಪುತ್ರ ಡಾ. ಉಜ್ವಲ್ ಊರುಬೈಲ್ ಜಯಪ್ರಕಾಶ್ (Dr. UJWAL OORUBAIL JAYAPRAKASH) ಅವರು ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ ಇದರ ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿ ಇದೀಗ ಅದರ ಕುಲಸಚಿವರು (ಮೌಲ್ಯಮಾಪನ) – Registrar (Evaluation) ಆಗಿ ನೇಮಕಗೊಂಡಿದ್ದಾರೆ.
ಕನಸುಗಾರ
ಇತ್ತೀಚೆಗೆ, ಅಕ್ಟೋಬರ್ 27ರಂದು, ಅಧಿಕಾರ ಸ್ವೀಕರಿಸಿದ ಡಾ. ಉಜ್ವಲ್ ‘ನ್ಯೂಸ್ ಪುತ್ತೂರು’ ಜೊತೆ ಮಾತನಾಡಿ ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ. ಈಗಾಗಲೇ ಸಾಕಷ್ಟು ಯಾಂತ್ರೀಕರಣಗೊಂಡಿರುವ ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗದ ಕಾರ್ಯಾಚರಣೆಯನ್ನು ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಶೈಲಿಗೆ ಸಮಾನವಾಗಿ ರೂಪಿಸುವ ಕನಸಿನ ಯೋಜನೆಯನ್ನು ಅವರು ಹೊಂದಿದ್ದಾರೆ. ಸ್ವತಃ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಅವರಿಗೆ ಇದು ಸಾಧ್ಯವಿದೆ, ಸಾಧ್ಯವಾಗಲಿ.
























