ಮೈಸೂರು: ನಕಲಿ ಅಂಕಪಟ್ಟಿ ಪಡೆಯಲು 18 ಸಾವಿರ ರೂ. ಗಳನ್ನು ಕೇಳುತ್ತಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬಳು ಮೈಸೂರು ವಿ.ವಿ. ಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಮೀಪ ರಸ್ತೆಯಲ್ಲಿ ಮಲಗಿ ವಿಭಿನ್ನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಬಿ.ಇಡಿ. ಗೆ ಪ್ರವೇಶಾತಿ ಪಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ವಿವಿಯಲ್ಲೇ ಇರುವ ನನ್ನ ಎಸ್ ಎಸ್ ಎಲ್ ಸಿ ಮತ್ತು ಪದವಿ ಅಂಕಪಟ್ಟಿಗಳನ್ನು ನೀಡುವಂತೆ ಮನವಿ ಮಾಡಿದ್ದೆ. ಆದರೆ ಬಾಕಿ ಶುಲ್ಕ ಪಾವತಿ ಸಿ ದಲ್ಲಿ ಅಂಕ ಪಟ್ಟಿ ನೀಡುವುದಾಗಿ ತಿಳಿಸಿದರು. ನಾನು ಈಗಾಗಲೇ ಬಾಕಿ ಶುಲ್ಕ ಪಾವತಿ ಮಾಡಿದ್ದೇನೆ. ಆ ರಸೀತಿಗಳನ್ನು ತೋರಿಸಲು ಸಿದ್ದವಿದ್ದರೂ, ಸಂಬಂಧಪಟ್ಟವರು ಅದನ್ನು ಪರಿಶೀಲಿಸಲು ಸಿದ್ಧರಾಗಿಲ್ಲ. ಅದಕ್ಕಾಗಿ ನಾನು ಈ ರೀತಿ ಪ್ರತಿಭಟಿಸಿದ್ದೇನೆ ಎಂದು ಯುವತಿ ಹೇಳಿದ್ದಾರೆ.
ವಿದ್ಯಾರ್ಥಿನಿ 2021ರಲ್ಲೇ ಮಾನಸಗಂಗೋತ್ರಿಯಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಆದರೆ, ಅನಾರೋಗ್ಯದ ಕಾರಣ ದ್ವಿತೀಯ ವರ್ಷದ ಪ್ರವೇಶ ಶುಲ್ಕವನ್ನು ನಿಧಾನವಾಗಿ ಪಾವತಿಸುತ್ತೇನೆ ಎಂದು ತಿಳಿಸಿದ್ದರು. ಹಾಗಾಗಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿತ್ತು ಅಲ್ಲದೆ, ಅವರ ಖಾತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನವು ಜಮೆಯಾಗಿದೆ. ಆ ಹಣದಲ್ಲಿಯೂ ಬಾಕಿ ಪಾವತಿಸಿಲ್ಲ. ಮೂರು ವರ್ಷದ ನಂತರ ಇದೀಗ ಬಂದು ಅಂಕಪಟ್ಟಿ ಕೇಳುತ್ತಿದ್ದಾರೆ. ಬಾಕಿ ಶುಲ್ಕ ಪಾವತಿಸಿದರೆ ಮಾತ್ರ ಅಂಕಪಟ್ಟಿ ನೀಡುವುದಾಗಿ ವಿಭಾಗದವರು ತಿಳಿಸಿದ್ದಾರೆ. ಅದಕ್ಕೆ ಕೋಪಗೊಂಡು ವಿದ್ಯಾರ್ಥಿನಿ ಪ್ರತಿಭಟನೆ ನಡೆಸಿದ್ದಾರೆ’ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಪೊಲೀಸರು ಯುವತಿಯನ್ನು ವಿವಿಯಲ್ಲಿ ಕೂರಿಸಿ ವಿಚಾರಣೆ ನಡೆಸಿದ್ದಾರೆ.
























