ಆತುರದ, ಉದ್ವೇಗದ ಹೇಳಿಕೆ ನೀಡಿ ಕಾಂಗ್ರೆಸ್ ಜಾಲದಲ್ಲಿ ಸಿಕ್ಕಿಬೀಳಬೇಡಿ ಎಂದು ಸಲಹೆ
ಬೆಂಗಳೂರು: ಆತುರದ, ಉದ್ವೇಗದ ಹೇಳಿಕೆ ನೀಡಿ ಕಾಂಗ್ರೆಸ್ ಹೆಣೆಯುವ ಜಾಲದಲ್ಲಿ ಸಿಕ್ಕಿಬೀಳಬೇಡಿ ಎಂದು ಬಿಜೆಪಿ ನಾಯಕರಿಗೆ ಆರ್ಎಸ್ಎಸ್ ಪಾಠ ಮಾಡಿದೆ. ಪಥ ಸಂಚಲನ ಜಟಾಪಟಿ ನಡುವೆ ಬಿಜೆಪಿ ನಾಯಕರ ಜೊತೆ ಆರ್ಎಸ್ಎಸ್ ಸೋಮವಾರ ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದಲ್ಲಿ ಪ್ರಸಕ್ತ ವಿದ್ಯಮಾನಗಳ ಕುರಿತು ಮಹತ್ವದ ಬೈಠಕ್ ನಡೆಸಿದ್ದು, ಇದರಲ್ಲಿ ರಾಜಕೀಯ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ತಿಳಿಸಿದೆ.
ಆರ್ಎಸ್ಎಸ್ ಮುಖಂಡರಾದ ತಿಪ್ಪೇಸ್ವಾಮಿ, ರಘುನಂದನ್, ವಾದಿರಾಜ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕರಾದ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಶಾಸಕರಾದ ಡಾ.ಅಶ್ವತ್ಥ್ ನಾರಾಯಣ, ಜನಾರ್ದನ ರೆಡ್ಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಕೆಲವು ಸಂಸದರು, ಶಾಸಕರು ಮತ್ತು ಎಂಎಲ್ಸಿಗಳು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು. ಪಕ್ಷದ ರಾಜ್ಯ ಮತ್ತು ಜಿಲ್ಲಾ ವಕ್ತಾರರು, ನಿಯಮಿತವಾಗಿ ಸುದ್ದಿಗೋಷ್ಠಿ ನಡೆಸುವ ಬಿಜೆಪಿ ಜನಪ್ರತಿನಿಧಿಗಳೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆರ್ಎಸ್ಎಸ್ ಬಗ್ಗೆ ಕಾಂಗ್ರೆಸ್ನವರು ಕೆಟ್ಟ ಅಭಿಪ್ರಾಯ ಸೃಷ್ಟಿಸುತ್ತಿದ್ದಾರೆ. ಸಂಘಕ್ಕೆ 100 ವರ್ಷದ ಇತಿಹಾಸ ಇದ್ದು ಇಂಥ ಎಷ್ಟೋ ಕಠಿಣ ಸಂದರ್ಭಗಳನ್ನು ಸಂಘ ಎದುರಿಸಿ ಮೆಟ್ಟಿ ನಿಂತಿದೆ. 3 ಸಲ ಸಂಘವನ್ನು ನಿಷೇಧ ಮಾಡುವ ಅವರ ಪ್ರಯತ್ನಗಳು ವಿಫಲವಾಗಿವೆ. ಈಗ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸಂಘದ ವಿಚಾರ ಕೆದಕಿದ್ದಾರೆ. ಆತುರದ, ಉದ್ವೇಗದ ಹೇಳಿಕೆ ನೀಡಿ ಕಾಂಗ್ರೆಸ್ ಜಾಲದಲ್ಲಿ ಸಿಕ್ಕಿಬೀಳಬೇಡಿ. ಈಗಿನ ಸವಾಲಿನ ಪರಿಸ್ಥಿತಿಯನ್ನೂ ಸಂಘ ಯಶಸ್ವಿಯಾಗಿ ಎದುರಿಸುತ್ತದೆ ಎಂದು ಆರ್ಎಸ್ಎಸ್ ಮುಖಂಡರು ತಿಳಿಸಿದ್ದಾರೆ.
ಆರ್ಎಸ್ಎಸ್ ವಿರುದ್ಧದ ಷಡ್ಯಂತ್ರ ಎದುರಿಸಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವುದು, ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಬಯಲಿಗೆಳೆದು ಕಾಂಗ್ರೆಸ್ ನಾಯಕರ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದು, ಕಾಂಗ್ರೆಸ್ ವಿರುದ್ಧ ಪರಿಣಾಮಕಾರಿ ಹೋರಾಟ ರೂಪಿಸುವುದು ಮುಂತಾದ ಸಲಹೆಯನ್ನು ಬೈಠಕ್ನಲ್ಲಿ ನೀಡಲಾಗಿದೆ.
ಕಾಂಗ್ರೆಸ್ ಸೇರಿ ಬೇರೆ ಸರ್ಕಾರಗಳು ಬಂದಾಗ ನರೇಟಿವ್ ಸೆಟ್ ಆಗುತ್ತಲೇ ಇರುತ್ತೆ. ಆರ್ಎಸ್ಎಸ್ ನಿಷೇಧ ಮಾಡಿದಾಗಲೂ ಇಂತಹದ್ದೇ ಸನ್ನಿವೇಶ ಸೃಷ್ಟಿಯಾಗಿತ್ತು. ಆ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳು ಇರಲಿಲ್ಲ. ಈಗ ಸಾಮಾಜಿಕ ಮಾಧ್ಯಮಗಳು ಮುಂಚೂಣಿಯಲ್ಲಿದ್ದು, ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬ ಪರಿಸ್ಥಿತಿ ಇದೆ. ಕೆಲವೊಂದಕ್ಕೆ ಮೌನವೇ ಉತ್ತರವಾಗಿರಬೇಕು. ಪಕ್ಷದಲ್ಲಿ ಒಂದು ರಿಸರ್ಚ್ ವಿಂಗ್ ಇಟ್ಟುಕೊಳ್ಳಿ. ಈ ರೀತಿಯ ಸಂದರ್ಭ ಬಂದಾಗ ಏನು ಮಾಡಬೇಕೆಂದು ಯೋಚಿಸಿ ಎಂದು ಆರ್ಎಸ್ಎಸ್ ಮುಖಂಡರು ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ. ಧರ್ಮಸ್ಥಳ ಪ್ರಕರಣವನ್ನು ಅವರು ಯಾವ ರೀತಿ ಮುನ್ನೆಲೆಗೆ ತಂದರು ಎಂಬುದನ್ನ ನೋಡಿದ್ದೇವೆ. ಇಂತಹ ಸಂದರ್ಭ ಬಂದಾಗ ಅದನ್ನು ಸರಿಯಾಗಿ ಕೌಂಟರ್ ಮಾಡಬೇಕಾಗುತ್ತದೆ ಎಂದು ಕಾರ್ಯಾಗಾರದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕೂಡ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
























