ಮಂಗಳೂರು : ಬಂಗಾಲ ಕೊಲ್ಲಿಯಲ್ಲಿ ಮತ್ತೆ ವಾಯಬಾರ ಕುಸಿತದ ಸಾಧ್ಯತೆ ಗೋಚರಿಸಿದ್ದು, ಇದರ ಪರಿಣಾಮವಾಗಿ ಕರಾವಳಿಯ ಕೆಲವೆಡೆ ಒಂದೆರಡು ದಿನ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಬುಧವಾರದಿಂದ 2-3 ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಭಾನುವಾರದಿಂದ ಮಳೆ ಕ್ಷೀಣಗೊಂಡಿತ್ತು. ಮಂಗಳವಾರ ಮೋಡ ಕವಿದ ವಾತಾವರಣವಿದ್ದು ಬೆಳಗ್ಗೆ ಅಲ್ಲಲ್ಲಿ ತುಂತುರ ಮಳೆಯಾಗಿದೆ. ಸೆಕೆಯ ತೀವ್ರತೆಯೂ ಇದ್ದು, ಉಡುಪಿ ಜಿಲ್ಲೆಯ ಕೆಲವೆಡೆ ಮೋಡ ಮತ್ತು ಬಿಸಿಲಿನ ವಾತಾವರಣದ ನಡುವೆ ತುಂತುರು ಮಳೆಯಾಗಿದೆ. ಎರಡು ದಿನಗಳಿಂದ ಉತ್ತಮ ಬಿಸಿಲು ಇದ್ದುದರಿಂದ ಭತ್ತದ ಕಟಾವು ಭರದಿಂದ ಸಾಗುತ್ತಿದೆ. ಮತ್ತೆ ಮಳೆ ಆರಂಭವಾದರೆ ಇದಕ್ಕೆ ಸಮಸ್ಯೆಯಾಗಲಿದೆ.
ಹಿಂಗಾರು ಮಳೆ ಮುಂದುವರಿದ ಪರಿಣಾಮವಾಗಿ ಭತ್ತದ ಕಟಾವಿಗೆ ತೀವ್ರ ಸಮಸ್ಯೆಯಾಗಿತ್ತು. ಹಿಂಗಾರಿನಲ್ಲಿ ಅಬ್ಬರಿಸಿ ಮಳೆ ಬಂದ ಪರಿಣಾಮ ಅನೇಕ ಗದ್ದೆಗಳಲ್ಲಿ ಪೈರು ಮಲಗಿದ ಪರಿಣಾಮ ಯಂತ್ರದ ಮೂಲಕ ಕೊಯ್ಲೆಗೆ ಕಷ್ಟವಾಗುತ್ತಿದೆ. ಇದೀಗ ಮತ್ತೆ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರೈತರಿಗೆ ಚಿಂತೆ ಶುರುವಾಗಿದೆ. ಇನ್ನೂ ಹಲವೆಡೆ ಕಟಾವು ಕಾರ್ಯ ಬಾಕಿ ಉಳಿದಿದೆ. ಅಂತೆಯೇ ಈ ಅಕಾಲಿಕ ಮಳೆ ಅಡಿಕೆ ಬೆಳೆಗೂ ಸಮಸ್ಯ ತಂದೊಡ್ಡಲಿದೆ ಎನ್ನಲಾಗುತ್ತಿದೆ. ಈಗಾಗಲೇ ಕೊಳೆ ರೋಗದಿಂದ ಬಳಲುತ್ತಿರುವ ಅಡಿಕೆ ಬೆಳೆಯನ್ನು ಅಕಾಲಿಕ ಮಳೆ ಇನ್ನಷ್ಟು ಕಾಡಲಿದೆ.
























