ನಿಷೇಧ ಹೇಳಿಕೆಗಳಿಗೆ ಮೊದಲ ಬಾರಿ ಅಧಿಕೃತವಾಗಿ ಪ್ರತಿಕ್ರಿಯಿಸಿದ ಆರ್ಎಸ್ಎಸ್
ನವದೆಹಲಿ: ಆರ್ಎಸ್ಎಸ್ ನಿಷೇಧಿಸಬೇಕು ಎಂದು ಪದೇಪದೆ ಹೇಳುತ್ತಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ್ದು, ಈ ಕುರಿತು ಮಾತನಾಡಿರುವ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಯಾರೋ ಬಯಸಿದ ಮಾತ್ರಕ್ಕೆ ಸಂಘಟನೆಯನ್ನು ನಿಷೇಧಿಸಲು ಸಾಧ್ಯವಿಲ್ಲ, ಇಂತಹ ಬೇಡಿಕೆ ಇಡುವವರು ಹಿಂದಿನ ಅನುಭವದಿಂದ ಪಾಠ ಕಲಿಯಬೇಕು ಎಂದು ತಿರುಗೇಟು ನೀಡಿದ್ದಾರೆ.
ಜಬಲ್ಪುರದಲ್ಲಿ ಮೂರು ದಿನಗಳ ಆರ್ಎಸ್ಎಸ್ ಅಖಿಲ ಭಾರತ ಕಾರ್ಯಕಾರಿಣಿ ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೂರು ಬಾರಿ ಇಂತಹ ಪ್ರಯತ್ನಗಳು ನಡೆದಿದ್ದವು, ಆಗ ಸಮಾಜ ಏನು ಹೇಳಿತು, ನ್ಯಾಯಾಲಯ ಏನು ಹೇಳಿತು? ಇಷ್ಟೆಲ್ಲ ಆದರೂ ಸಂಘದ ಕೆಲಸ ಬೆಳೆಯುತ್ತಲೇ ಹೋಯಿತು. ನಿಷೇಧ ಹೇರಲು ಸೂಕ್ತ ಕಾರಣಗಳಿರಬೇಕು ಎಂದರು.
ಯಾರೋ ಬಯಸಿದ ಮಾತ್ರಕ್ಕೆ ನಿಷೇಧಿಸಲು ಆಗುವುದಿಲ್ಲ. ಭಾರತದ ಏಕತೆ, ಭದ್ರತೆ ಮತ್ತು ಸಂಸ್ಕೃತಿಗಾಗಿ ಕೆಲಸ ಮಾಡುವ ಸಂಘಟನೆಯನ್ನು ನಿಷೇಧಿಸಬೇಕು ಎಂದು ನಾಯಕರೊಬ್ಬರು ಹೇಳಿದರೆ, ಅವರು ಕಾರಣವನ್ನು ಸಹ ತಿಳಿಸಬೇಕು ಎಂದು ಹೊಸಬಾಳೆ ಹೇಳಿದ್ದಾರೆ.
ಸಮಾಜವು ಆರ್ಎಸ್ಎಸ್ ಅನ್ನು ಒಪ್ಪಿಕೊಂಡಿದೆ. ಸರ್ಕಾರಿ ವ್ಯವಸ್ಥೆ ಕೂಡ ಅಂತಹ ನಿಷೇಧಗಳನ್ನು ತಪ್ಪು ಎಂದು ತೀರ್ಪು ನೀಡಿದೆ. ಈಗ ನಿಷೇಧಕ್ಕೆ ಒತ್ತಾಯಿಸುವವರು ಹಿಂದಿನ ಅನುಭವಗಳಿಂದ ಕಲಿಯಬೇಕು ಎಂದು ಹೊಸಬಾಳೆ ಹೇಳಿದ್ದಾರೆ.
























