ಪರ್ಪುಂಜ ಕೊಯಿಲತ್ತಡ್ಕ ಅಬ್ರೋಡ್ ಹಾಲ್ ಬಳಿ ಸಂಭವಿಸಿದ ಭೀಕರ ಅಪಘಾತ
ಪುತ್ತೂರು: ಆಟೋಗೆ ಕಾರು ಡಿಕ್ಕಿಯಾದ ಪರಿಣಾಮ ನಾಲ್ಕೂವರೆ ವರ್ಷದ ಮಗು ದಾರುಣವಾಗಿ ಮೃತಪಟ್ಟಿರುವ ಘಟನೆ ಪುತ್ತೂರು ತಾಲೂಕಿನ ಪರ್ಪುಂಜ ಕೊಯಿಲತ್ತಡ್ಕದಲ್ಲಿ ನಡೆದಿದೆ. ನಿನ್ನೆ ರಾತ್ರಿ ಪುತ್ತೂರು ತಾಲೂಕಿನ ಕುಂಬ್ರ ಸಮೀಪ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪರ್ಪುಂಜ ಕೊಯಿಲತ್ತಡ್ಕ ಅಬ್ರೋಡ್ ಹಾಲ್ ಬಳಿ ಈ ಭೀಕರ ಅಪಘಾತವಾಗಿದೆ. ಸುಳ್ಯ ಕಡೆಯಿಂದ ಪುತ್ತೂರಿನತ್ತ ತೆರಳುತ್ತಿದ್ದ ಕಾರು ಚಾಲಕ ಬಸ್ಸನ್ನು ಓವರ್‌ಟೇಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ಪುತ್ತೂರಿನಿಂದ ತಿಂಗಳಾಡಿ ಕಡೆಗೆ ತೆರಳುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ.
ಕಾರು ಮತ್ತು ಆಟೋ ಮುಖಾಮುಖಿ ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ ಅನ್ನು ಓವರ್‌ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಆಟೋಗೆ ಕಾರು ಚಾಲಕ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಆಟೋ ಚಾಲಕ ಹನೀಫ್ ಬನ್ನೂರು ಅವರ ನಾಲ್ಕೂವರೆ ವರ್ಷದ ಮಗಳು ಶಜ್ವಾ ಫಾತಿಮಾ ನಿನ್ನೆಯೇ ದುರ್ಮರಣಕ್ಕೀಡಾಗಿದೆ. ಮಗುವಿನ ಅಜ್ಜಿ ಇಂದು ಮೃತಪಟ್ಟಿದ್ದಾರೆ.
ಹನೀಫ್ ಅವರ ಪತ್ನಿ, ಅತ್ತೆ ಮತ್ತು ಇಬ್ಬರು ಮಕ್ಕಳಿಗೆ ಗಂಭೀರವಾಗಿ ಗಾಯವಾಗಿತ್ತು. ಈ ಪೈಕಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅತ್ತೆ ಪುತ್ತೂರು ಬೊಳುವಾರು ಕಾಪಿಕಾಡ್ ನಿವಾಸಿ ಝುಲೈಕಾ ಚಿಕಿತ್ಸೆ ಫಲ ನೀಡದೆ ಕೊನೆಯುಸಿರೆಳೆದಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
























