ಲಿಕ್ಕರ್ ಗ್ಯಾಂಗ್ ಜೊತೆ ಎನ್‌ಕೌಂಟರ್ ನಡೆದಾಗ ಸ್ಥಳದಲ್ಲಿದ್ದ ಯುವಕನಿಗೆ ಬಡಿದ ಗುಂಡು
ನವದೆಹಲಿ: ಸೌದಿ ಅರೇಬಿಯಾದ ಜೆದ್ದಾದಲ್ಲಿ ಕಳೆದ ಅ.16ರಂದು ಪೊಲೀಸರು ಹಾಗೂ ಮದ್ಯ ಸ್ಮಗ್ಲಿಂಗ್ ಗ್ಯಾಂಗ್ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಜಾರ್ಖಂಡ್ ಮೂಲದ ಯುವಕ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಮೃತ ಯುವಕನನ್ನು ವಿಜಯ್ ಕುಮಾರ್ ಮಹತೊ (26) ಎಂದು ಗುರುತಿಸಲಾಗಿದ್ದು, ಜಾರ್ಖಂಡ್‌ನ ಈತ ಗಿರಿಧ್ ಜಿಲ್ಲೆಯ ದುಮ್ರಿ ತಾಲೂಕಿನ ಮಧ್ ಗೋಪಾಲಿ ಪಂಚಾಯ್ತಿ ವ್ಯಾಪ್ರಿಯ ಧೂದ್‌ಪಾನಿಯಾ ಗ್ರಾಮದವರು. ಟವರ್ಲೈನ್ ಫಿಟ್ಟರ್ ಆಗಿ ಕಳೆದ ಒಂಬತ್ತು ತಿಂಗಳಿಂದ ಸೌದಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಹುಂಡೈ ಇಂಜಿನಿಯರಿಂಗ್ ಆಂಡ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಕಳೆದ ಒಂಬತ್ತು ತಿಂಗಳಿಂದ ಟವರ್‌ಲೈನ್ ಫಿಟ್ಟರ್ ಆಗಿ ನೌಕರಿ ಮಾಡುತ್ತಿದ್ದ ವಿಜಯ್ ಕುಮಾರ್ ಕಂಪನಿಯ ಅಧಿಕಾರಿಗಳ ಸೂಚನೆಯಂತೆ ಅ.16ರಂದು ಸೈಟ್‌ನಿಂದ ಮೆಟಿರಿಯಲ್‌ಗಳನ್ನು ತರಲು ಹೋಗಿದ್ದರು. ಈ ವೇಳೆ ಅಲ್ಲಿ ಪೊಲೀಸರು ಮತ್ತು ಲಿಕ್ಕರ್ ಸ್ಮಗ್ಲರ್‌ಗಳ ನಡುವೆ ಗುಂಡಿನ ಕಾಳಗ ನಡೆಯುತ್ತಿತ್ತು. ಇದರ ಅರಿವಿಲ್ಲದೆ ಅಲ್ಲಿಗೆ ಹೋದ ವಿಜಯ್ ಕುಮಾರ್ ಪೊಲೀಸರು ಹಾರಿಸಿದ ಗುಂಡು ಬಡಿದು ಗಾಯಗೊಂಡಿದ್ದರು. ಕೂಡಲೇ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು.
ಅ.16ರಂದು ತನ್ನ ಪತ್ನಿ ಬಸಂತಿದೇವಿಗೆ ಧ್ವನಿ ಸಂದೇಶ ಕಳುಹಿಸಿರುವ ವಿಜಯ್ ಕುಮಾರ್, ಗುಂಡಿನ ಚಕಮಕಿ ವೇಳೆ ಸಿಕ್ಕಿಹಾಕಿಕೊಂಡು ತೀವ್ರ ಗಾಯಗಳಾಗಿರುವುದಾಗಿ ಹೇಳಿದ್ದರು. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದವರು ಭಾವಿಸಿದ್ದರು. ಶೂಟೌಟ್ ನಲ್ಲಿ ಮೃತಪಟ್ಟಿದ್ದಾಗಿ ಅ.24ರಂದು ಮಾಹಿತಿ ಬಂದಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಯುವಕನ ಮೃತದೇಹವನ್ನು ಭಾರತಕ್ಕೆ ಮರಳಿಸಲು ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಂತೆ ಜಾರ್ಖಂಡ್ ಕಾರ್ಮಿಕ ಇಲಾಖೆ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಕೋರಿದೆ. ಗಿರಿಧ್ ಜಿಲ್ಲೆಯ ದುಮ್ರಿ ತಾಲೂಕಿನ ಯುವಕ ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆತನ ದೇಹವನ್ನು ಭಾರತಕ್ಕೆ ಮರಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆಯ ವಲಸೆ ನಿಯಂತ್ರಣ ಕೋಶದ ಮುಖ್ಯಸ್ಥ ಶಿಖರ ಲಾಕ್ರಾ ಹೇಳಿದ್ದಾರೆ. “ಯುವಕನ ಹುಟ್ಟೂರಿಗೆ ಮೃತದೇಹ ತರಲು ವಿಧಿವಿಧಾನಗಳನ್ನು ಪೂರೈಸುವ ಸಂಬಂಧ ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜಿದ್ದಾ ಪೊಲೀಸ್ ಅಧಿಕಾರಿಗಳ ಜತೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಅವರು ವಿವರಿಸಿದ್ದಾರೆ.
























