ಅಪಘಾತ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್ ಸತಾಯಿಸಿದ್ದ ಸವಾರ
ಬಂಟ್ವಾಳ : ಬಿಸಿಲೆ ಘಾಟ್‌ನಲ್ಲಿ ಗುರುವಾರ ಮಿನಿಬಸ್ ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುತ್ತಿದ್ದ ಆಂಬುಲೆನ್ಸ್‌ನ ಸಂಚಾರಕ್ಕೆ ತಡೆಯೊಡ್ಡಿದ ಸ್ಕೂಟರ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದ ಗಾಯಾಳುಗಳನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸ್ಕೂಟರ್ ಸವಾರ ಅಡ್ಡಿಪಡಿಸಿದ ಘಟನೆ ಬಿ.ಸಿ. ರೋಡಿನಲ್ಲಿ ನಡೆದಿದೆ.
ಆಂಬುಲೆನ್ಸ್ ಹಾರ್ನ್ ಮೊಳಗಿಸುತ್ತಿದ್ದರೂ ಸ್ಕೂಟರ್ ಸವಾರ ಕೇರ್ ಮಾಡದೆ ಉದ್ದೇಶಪೂರ್ವಕವಾಗಿ ಅಡ್ಡಾದಿಡ್ಡಿ ಸ್ಕೂಟರ್ ಚಲಾಯಿಸುತ್ತಾ ಆಂಬುಲೆನ್ಸ್‌ಗೆ ಸೈಡ್ ಕೊಡದೆ ಸತಾಯಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಸ್ಕೂಟರ್ ಸವಾರನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂಬ್ಯುಲೆನ್ಸಿಗೆ ಅಡ್ಡಿಪಡಿಸಿ ಆರೋಪಿ ಸ್ಕೂಟರ್ ಸವಾರನನ್ನು ಪುತ್ತೂರು ತಾಲೂಕು ಬೆಟ್ಟಂಪಾಡಿ ನಿವಾಸಿ ಮನ್ಸೂರ್ (38) ಎಂದು ಗುರುತಿಸಲಾಗಿದೆ. ಗುರುವಾರ ಬಿಸಿಲೆ ಘಾಟ್‌ನಲ್ಲಿ ನಡೆದ ಅಪಘಾತದ ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನ ಸವಾರ ಅಂಬ್ಯುಲೆನ್ಸ್ ಸೈರನ್ ಶಬ್ದ ಕೇಳಿಯೂ ದಾರಿ ಬಿಟ್ಟು ಕೊಡದೆ ಅಂಬ್ಯುಲೆನ್ಸ್ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದಾನೆ ಎಂದು ದೂರಲಾಗಿದೆ. ಆರೋಪಿ ಸ್ಕೂಟರ್ ಸವಾರನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸ್ಕೂಟರ್ ಸವಾರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
























