ಬಿಜೆಪಿ ಆಂತರಿಕ ಕಲಹವೇ ಕಾರಣ ಎಂದ ಉಪಮುಖ್ಯಮಂತ್ರಿ
ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಬಿಜೆಪಿ ನಾಯಕರ ಆಂತರಿಕ ಕಲಹವೇ ಕಾರಣ ಎನ್ನುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಅದಕ್ಕೆ ಸಂಬಂಧಪಟ್ಟಂತೆ ಹೇಳಿಕೆಗಳು, ಮಾತುಗಳು ನಿಮ್ಮ (ಮಾಧ್ಯಮಗಳ) ಮುಂದಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಧರ್ಮಸ್ಥಳ ಪ್ರಕರಣ ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಧರ್ಮಸ್ಥಳ ಪ್ರಕರಣ ವಿಚಾರದಲ್ಲಿ ವ್ಯಕ್ತಿ, ಕುಟುಂಬ ಮತ್ತು ಸಂಸ್ಥೆಗೆ ಎಷ್ಟು ಹಾನಿ ಮಾಡಬೇಕೋ ಅದನ್ನು ಈಗಾಗಲೇ ಮಾಡಲಾಗಿದೆ. ಒಟ್ಟಿನಲ್ಲಿ ಧರ್ಮ ಮತ್ತು ನ್ಯಾಯ ಉಳಿಯಬೇಕು ಎಂಬುದು ನಮ್ಮ ಅಭಿಲಾಷೆ ಎಂದು ತಿಳಿಸಿದರು.
ವೀರೇಂದ್ರ ಹೆಗ್ಗಡೆಯವರ ವ್ಯಕ್ತಿತ್ವವೇ ಬೇರೆ. ಆ ಸಂಸ್ಥೆಯ ಹೆಸರಿಗೆ ಹಾನಿಯಾಗುತ್ತಿದೆಯಲ್ಲ ಎಂದು ಬೇಸರವಾಗಿತ್ತು. ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ ಎನ್ನುವ ಗಾದೆ ಇದೆ. ಅಂದರೆ ತಿರುಪತಿಯಲ್ಲಿ ಕಾಸಿನ ಹರಕೆ, ಧರ್ಮಸ್ಥಳದಲ್ಲಿ ಮಾತಿನ ಹರಕೆ ಕಟ್ಟಿಕೊಂಡರೆ ಬಿಡುವಂತಿಲ್ಲ. ಇಂತಹ ಪದ್ಧತಿಯಲ್ಲಿ ನಡೆದುಕೊಂಡು ಹೋಗುವ ಕಡೆ ಯಾವುದೇ ಸಮಸ್ಯೆ ಇಲ್ಲ ಎಂಬುದು ನನ್ನ ನಂಬಿಕೆ ಎಂದರು. ನನ್ನ ವೈಯಕ್ತಿಕ ಮಾಹಿತಿ ಪ್ರಕಾರ ಹಾಗೂ ಧರ್ಮಸ್ಥಳದಲ್ಲಿ ಯಾವ ಪದ್ಧತಿ ನಡೆಯುತ್ತಿದೆ, ಅಲ್ಲಿ ಯಾವ ಸಂಪ್ರದಾಯಗಳನ್ನು ಆಚರಿಸಲಾಗುತ್ತಿದೆ ಎನ್ನುವ ಬಗ್ಗೆ ನನ್ನ ಅನುಭವದ ಆಧಾರದಲ್ಲಿ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳ ಪ್ರಕರಣದ ಕುರಿತಾಗಿ ಎಸ್‌ಐಟಿ ಸರ್ಕಾರಕ್ಕೆ ವರದಿ ಸಲ್ಲಿಸಿದೆಯೇ, ಇಲ್ಲವೇ ಎನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ. ವರದಿಯನ್ನು ಶೀಘ್ರದಲ್ಲೇ ನೀಡಬೇಕು ಎಂದು ಗೃಹಸಚಿವರು ಹೇಳಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಎಸ್‌ಐಟಿ ವರದಿ ಬಂದ ನಂತರ ಏನಿದೆ ಎಂಬುದನ್ನು ಗಮನಿಸೋಣ. ಅದರಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ. ಮಾಧ್ಯಮಗಳಲ್ಲಿ ಬಂದಷ್ಟು ಮಾಹಿತಿ ಮಾತ್ರ ನನಗೆ ತಿಳಿದಿದೆ. ನಾನು ಯಾವ ಅಧಿಕಾರಿಯ ಬಳಿಯೂ ಯಾವುದೇ ವರದಿ ಕೇಳಲು, ಮಾತನಾಡಲು ಹೋಗಿಲ್ಲ ಎಂದರು.
























