ಭ್ರಷ್ಟಾಚಾರದ ಬಗ್ಗೆ ದೂರುಗಳಿದ್ದರೆ ಕಚೇರಿಗೆ ಬಂದು ಮಾತನಾಡಿ ಎಂದು ಸವಾಲು
ಮಂಗಳೂರು : ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಮಾಜಿ ಸ್ಪೀಕರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮಂಗಳೂರು ಉತ್ತರದ ಶಾಸಕ ಡಾ.ಭರತ್ ಶೆಟ್ಟಿ ಅವರಿಗೆ ತಿರುಗೇಟು ನೀಡಿರುವ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಬಿಜೆಪಿಯವರ ಅಸೂಯೆಗೆ ಮದ್ದಿಲ್ಲ ಎಂದಿದ್ದಾರೆ.
ನಿನ್ನೆಯಷ್ಟೇ ಅಮೆರಿಕ ಪ್ರವಾಸದಿಂದ ಹಿಂದಿರುಗಿದ ಖಾದರ್ ಮಂಗಳೂರಿನಲ್ಲಿ ಆರೋಪಗಳಿಗೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ಆರೋಪ ವಿಚಾರ ನನ್ನ ಗಮನಕ್ಕೆ ಬಂದಿದೆ. ಎಲ್ಲ ರೋಗಕ್ಕೆ ಮದ್ದಿದೆ, ಆದರೆ ಅಸೂಯೆಗೆ ಮದ್ದಿಲ್ಲ. ಒಳ್ಳೆಯ ಕಾರ್ಯ ಆಗುವಾಗ ದೃಷ್ಟಿ ಬೊಟ್ಟು ಇಟ್ಟಂತೆ ಬಿಜೆಪಿಯವರು ಆರೋಪಿಸಿದ್ದಾರೆ. ಯಾರಿಗಾದರೂ ಸಂಶಯ ಇದ್ದರೆ ಕಚೇರಿಗೆ ಬಂದು ಮಾತನಾಡಲಿ, ಏನಾದರೂ ಸಂಶಯ ಇದ್ದರೆ ಬರಹ ರೂಪದಲ್ಲಿ ಕೊಡಲಿ. ಸಕಾರಾತ್ಮಕ ಉತ್ತರ ದೊರೆಯಲಿದೆ ಎಂದಿದ್ದಾರೆ.
ಎಲ್ಲೆಲ್ಲೋ ಕುಳಿತು ಮಾತಾನಾಡಿದರೆ ಉತ್ತರ ಕೊಡಲು ಆಗುತ್ತಾ? ರಾಜಕೀಯ ವ್ಯಕ್ತಿಯಾಗಿ ನಾನು ಕೂಡ ಏನನ್ನೋ ಮಾತಾಡಬಹುದು. ಆದರೆ, ನಾನು ಸಂವಿಧಾನಬದ್ಧ ಸ್ಪೀಕರ್ ಸ್ಥಾನದಲ್ಲಿದ್ದೇನೆ. ನನ್ನ ಕರ್ತವ್ಯ ಮಾಡುತ್ತಿದ್ದೇನೆ. ನನ್ನ ವಿರುದ್ಧ ಆರೋಪ ಮೊದಲೇನಲ್ಲ. ಶಾಸಕ ಆಗಿದ್ದಾಗಿನಿಂದ ಈ ರೀತಿ ಮಾತುಗಳನ್ನು ಕೆಳಿಕೊಂಡೇ ಬಂದಿದ್ದೇನೆ ಎಂದು ಖಾದರ್ ಹೇಳಿದ್ದಾರೆ.
ಸ್ಪೀಕರ್ ಯು.ಟಿ. ಖಾದರ್ ಲೂಟಿ ಖಾದರ್ ಹಂತಕ್ಕೆ ತಲುಪಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ಈ ಬಗ್ಗೆ ಪತ್ರ ಬರೆಯುತ್ತೇನೆ. ಖಾದರ್ ಇದನ್ನು ಸವಾಲಾಗಿ ಸ್ವೀಕರಿಸಬೇಕು, ಆರೋಪ ಮುಕ್ತರಾಗುತ್ತೇನೆ ಅಂತ ಹೇಳಬೇಕು ಎಂದು ಸಂಸದ ವಿಶ್ವೆಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ಭರತ್ ಶೆಟ್ಟಿ ಸ್ಪೀಕರ್ ಖಾದರ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿರುವ ಕಾರಣ, ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶ ನೀಡಬೇಕು. ವಿಧಾನಸಭೆಯಲ್ಲಿ ಬಾಗಿಲಿಗೆ ಮರದ ಕೆತ್ತನೆಯ ಪ್ರಧಾನ ಬಾಗಿಲು., ಶಾಸಕರ ಭವನದಲ್ಲಿ ಹಾಸಿಗೆ, ದಿಂಬು ಇತರ ವಸ್ತುಗಳಿಗೆ ಖರೀದಿಯಲ್ಲಿ ಕೋಟ್ಯಂತರ ಹಣ ದುಂದುವೆಚ್ಚ ಆಗಿದೆ. ಬೇಕಾದವರಿಗೆ ಟೆಂಡರ್ ಕೊಟ್ಟಿರುವ ಆರೋಪ ಕೇಳಿ ಬಂದಿದೆ ಎಂದು ಹೇಳಿದ್ದರು.
ಸಭಾಂಗಣದಲ್ಲಿ ಹೊಸ ಟಿವಿ, ಎಐ ಮಾನಿಟರ್ ಸಿಸ್ಟಂ ಹಾಗೂ ಗಂಡಭೇರುಂಡ ಗಡಿಯಾರದ ಬಗ್ಗೆ ಚರ್ಚೆ ಆಯ್ತು. ರಿಕ್ಲೇನರ್ ಚೇರ್, ಮಸಾಜ್ ಚೇರ್ಗೆ ಬಹಳ ವಿರೋಧ ವ್ಯಕ್ತವಾಯ್ತು. ಶಾಸಕರ ಕೊಠಡಿಗಳ ಭದ್ರತೆಗೆ ಸ್ಮಾರ್ಟ್ ಡೋರ್ ಲಾಕರ್, ಶಾಸಕರ ಭವನಕ್ಕೆ ಬಣ್ಣ, ಸುಣ್ಣ, ಕಾರ್ಪೆಟ್ ಹಾಕಿದ್ರು. ಪುಸ್ತಕ ಮೇಳಕ್ಕೆ 4.5 ಕೋಟಿ ವೆಚ್ಚ ಖರ್ಚು ಮಾಡಿದ್ರು. ಸ್ಪೀಕರ್ ಈ ರೀತಿ ಮಾಡುವ ಅವಶ್ಯಕತೆ ಇತ್ತಾ? ಇರಲಿಲ್ಲ. ಖರ್ಚು ವೆಚ್ಚದಲ್ಲೂ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಎಲ್ಲದರ ಬಗ್ಗೆ ತನಿಖೆ ನಡೆಸಲು ಸರ್ಕಾರ ಸೂಚಿಸಬೇಕು ಎಂದು ಕಾಗೇರಿ ಆಗ್ರಹಿಸಿದ್ದರು.
























