ಶ್ರೀಕೃಷ್ಣ ಮಠದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ-ಬೃಹತ್ ಗೀತೋತ್ಸವದಲ್ಲಿ ಭಾಗಿಯಾಗಲು ಆಗಮನ
ಉಡುಪಿ : ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮೋದಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದೆ. ಇದರ ಜೊತೆಗೆ ಇನ್ನಿತರ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ನಿರೀಕ್ಷೆಯಿದೆ. ಮುಖ್ಯವಾಗಿ ಮಂಗಳೂರಿನ ಪಣಂಬೂರಿನಲ್ಲಿ ನಿರ್ಮಾಣವಾಗಿರುವ ಬಂದರು ಕಾರ್ಮಿಕರ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸುವ ಕಾರ್ಯಕ್ರಮದಲ್ಲೂ ಭಾಗವಹಿಸುವ ನಿರೀಕ್ಷೆಯಿದೆ. ಆದರೆ ಈ ಕಾರ್ಯಕ್ರಮ ಇನ್ನೂ ದೃಢಪಟ್ಟಿಲ್ಲ.
ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ-ಬೃಹತ್ ಗೀತೋತ್ಸವದಲ್ಲಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ನವೆಂಬರ್ 28ರಂದು ಮಧ್ಯಾಹ್ನ 12 ಗಂಟೆಗೆ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಪ್ರಧಾನಿ ಮೋದಿ ಪ್ರಸಾದ ಸ್ವೀಕರಿಸಿದ ಬಳಿಕ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ-ಬೃಹತ್ ಗೀತೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಭಕ್ತರು ಮತ್ತು ಗಣ್ಯರು ಬೃಹತ್ ಪ್ರಮಾಣದಲ್ಲಿ ಸೇರುವ ನಿರೀಕ್ಷೆಯಿರುವುದರಿಂದ ಉಡುಪಿಯಲ್ಲಿ ಈಗಲೇ ಮೋದಿ ಭೇಟಿಗಾಗಿ ತಯಾರಿ ಶುರುವಾಗಿದೆ.
ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಅವರ ಭೇಟೆಯನ್ನು ಪ್ರಧಾನಿ ಕಚೇರಿ ದೃಢಪಡಿಸಿದೆ. ಹೀಗಾಗಿ ಅಗತ್ಯ ಎಲ್ಲ ವ್ಯವಸ್ಥೆಗಳನ್ನು ಈಗಾಗಲೇ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.
ನವೆಂಬರ್ 8ರಿಂದ 30ರವರೆಗೆ ಉಡುಪಿಯ ಶ್ರೀಕೃಷ್ಣ ಮಠ ಮತ್ತು ಪುತ್ತಿಗೆ ಮಠದ ಆಶ್ರಯದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ-ಬೃಹತ್ ಗೀತೋತ್ಸವ ನಡೆಯಲಿದೆ. ಕೊನೆಯ ದಿನ ಅಂದರೆ ನ.30ರಂದು ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಸೇರಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಕಾರ್ಯಕ್ರಮದಲ್ಲಿ ದೇಶದ ಗಣ್ಯರು ಸೇರಿದಂತೆ ಸಂತರು, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
























