ಸುಬ್ರಹ್ಮಣ್ಯಕ್ಕೆ ಮದುವೆಗೆಂದು ಬರುತ್ತಿದ್ದ ಬಸ್ 20 ಅಡಿ ಆಳಕ್ಕೆ ಪಲ್ಟಿ
ಸುಬ್ರಹ್ಮಣ್ಯ: ಮದುವೆ ಸಮಾರಂಭದಲ್ಲಿ ಭಾಗವಹಿಸಲು ವನಗೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಬರುತ್ತಿದ್ದ 30 ಜನರಿದ್ದ ಮಿನಿ ಬಸ್ ಬಿಸಿಲೆ ಘಾಟ್ ಡಬಲ್ ಟರ್ನ್‌ನಲ್ಲಿ 20 ಅಡಿ ಎತ್ತರದಿಂದ ಮಗುಚಿ ಬಿದ್ದಿದ್ದು, 20 ಜನರು ಗಾಯಗೊಂಡು 4 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದಲ್ಲಿ ಕೂಡುರಸ್ತೆ ವನಗೂರಿನ ಯುವಕ ಮತ್ತು ಏನೆಕಲ್ಲಿನ ಯುವತಿ ಮದುವೆ ಇಂದು ನಡೆಯಬೇಕಿತ್ತು. ವನಗೂರು ಕುಣಿಕೆರೆ ಬಸವೇಗೌಡರ ಮಗ ಯೋಗೇಶ್ ಅವರ ಮದುವೆ ಇಂದು ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲಗುಂದ ಹುಡುಗಿಯೊಂದಿಗೆ ನಿಶ್ಚಯವಾಗಿತ್ತು. ಇಂದು ಬೆಳಗ್ಗೆ ಮದುವೆ ಇದ್ದ ಕಾರಣ ಗಂಡಿನ ಕಡೆಯ 30 ಜನರು ಮಿನಿ ಬಸ್‌ನಲ್ಲಿ ಹೊರಟಿದ್ದರು.
ವಧು ಮತ್ತು ವರ ನಿನ್ನೆಯೇ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ಉಳಿದಂತೆ ವರನ ಕಡೆಯವರನ್ನು ಮಿನಿ ಬಸ್‌ನಲ್ಲಿ ಇಂದು ಬೆಳಗ್ಗೆ ಕರೆತರುವಾಗ ಈ ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ಸುಬ್ರಹ್ಮನ್ಯದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.
























