ಪುತ್ತೂರು: ಬೆಂಗಳೂರಿನಲ್ಲಿ ಪ್ರತಿಷ್ಠಿತ ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (Kempegowda Institute of Medical Sciences – KIMS) ಹಾಗೂ ರಾಜ್ಯಾದಾದ್ಯಂತ ವಿವಿಧ ಸಂಸ್ಥೆ ಮತ್ತು ಆಸ್ತಿಗಳನ್ನು ಹೊಂದಿರುವ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹಾಗೂ ಸುಳ್ಯದಲ್ಲಿ ದಿವಂಗತ ಡಾ. ಕುರುಂಜಿ ವೆಂಕಟ್ರಮಣ ಗೌಡರು ಕಟ್ಟಿ ಬೆಳೆಸಿದ Academy of Liberal Education ಇದರ ಬಿ ಟೀಂನ ಅಧ್ಯಕ್ಷ, ಡಾ. ರೇಣುಕಾಪ್ರಸಾದ್ ಕೆ. ವಿ.ಯವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥದ ದೇವಾರ್ಪಣ ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದ ವಿವಿಧ ನಾಯಕರು ಮತ್ತು ಅಧಿಕಾರಿಗಳನ್ನು ಆಹ್ವಾನಿಸಿ ಆಮಂತ್ರಣ ನೀಡಿದರು.

ಗಣ್ಯರಿಗೆ ಆಹ್ವಾನ
ಪ್ರಮುಖವಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಅಧ್ಯಕ್ಷ ಎಚ್. ಎಂ. ರೇವಣ್ಣ ಮತ್ತು ಕಾರ್ಯದರ್ಶಿ ಪುಷ್ಪಾ ಅಮರನಾಥ್, ಮೆಸ್ಕಾಂನ ಅಧ್ಯಕ್ಷ ಹರೀಶ್ ಕುಮಾರ್, ದ. ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ್, ಕರ್ನಾಟಕ ಸರಕಾರದ ಪೂರ್ವ ಸಚಿವ ಬಿ. ರಮಾನಾಥ ರೈ, ದ. ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ, ವಿರಾಜಪೇಟೆಯ ಶಾಸಕ ಮತ್ತು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ ಮತ್ತು ಇತರ ಅನೇಕ ಪ್ರಮುಖರಿಗೆ ಆಹ್ವಾನ ಪತ್ರಿಕೆ ನೀಡಲಾಯಿತು.
ಬೆಳ್ಳಿರಥ ಲೋಕಾರ್ಪಣ ಕಾರ್ಯಕ್ರಮದ ವಿವಿಧ ಹಂತಗಳು
• ದಿನಾಂಕ 03.11.2025ನೇ ಸೋಮವಾರ ರಾತ್ರಿ ಗಂಟೆ 8ಕ್ಕೆ ಕೋಟೇಶ್ವರದಲ್ಲಿ ಗುತ್ತಿಪೂಜೆ ಮತ್ತು ಶಿಲ್ಪಿಗಳಿಂದ ರಥ ಹಸ್ತಾಂತರ.
• ದಿನಾಂಕ 04.11.2025ನೇ ಮಂಗಳವಾರ ಪೂರ್ವಾಹ್ನ ಗಂಟೆ 8ಕ್ಕೆ ಕೋಟೇಶ್ವರದಿಂದ ಹೊರಟು, ಸಂಜೆ ಗಂಟೆ 4ಕ್ಕೆ ಪುತ್ತೂರಿಗೆ ಬಂದು ಸುಳ್ಯದಲ್ಲಿ ತಂಗುವುದು.
• ದಿನಾಂಕ 05.11.2025ನೇ ಬುಧವಾರ ಪೂರ್ವಾಹ್ನ ಗಂಟೆ 9ಕ್ಕೆ ಸುಳ್ಯದಿಂದ ಹೊರಟು ಸುಬ್ರಹ್ಮಣ್ಯಕ್ಕೆ ತಲುಪುವುದು.
• ದಿನಾಂಕ 09.11.2025ನೇ ಆದಿತ್ಯವಾರ ಸಂಜೆ ಗಂಟೆ 6ರಿಂದ ರಥಕ್ಕೆ ವಿವಿಧ ಪೂಜೆಗಳು.
• ದಿನಾಂಕ 10.11.2025ನೇ ಮಂಗಳವಾರ ಪೂರ್ವಾಹ್ನ ಗಂಟೆ 11ಕ್ಕೆ ರಥವನ್ನು ಶ್ರೀ ದೇವರಿಗೆ ಸಮರ್ಪಿಸುವುದು.
• ದಿನಾಂಕ 10.11.2025ನೇ ಮಂಗಳವಾರ ರಾತ್ರಿ ಗಂಟೆ 8ಕ್ಕೆ ಡಾ. ರೇಣುಕಾಪ್ರಸಾದ್ ಕೆ.ವಿ. ಮತ್ತು ಕುಟುಂಬದವರಿಂದ ನೂತನ ಬೆಳ್ಳಿರಥಕ್ಕೆ ಪ್ರಥಮ ಸೇವೆ.
ಆಹ್ವಾನ ಪತ್ರಿಕೆ ಹಂಚುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ದಿನೇಶ್ ಮಡ್ತಿಲ, ಮಾಧವ ಬಿ. ಟಿ. ಮತ್ತು ಇತರ ಅನೇಕರು ಜತೆಗಿದ್ದರು.
























