ಬೆಳ್ಳಿರಥ ಸಮರ್ಪಣಾ ಕಾರ್ಯಕ್ರಮಕ್ಕೆ ಡಾ. ರೇಣುಕಾಪ್ರಸಾದ್ ರಿಂದ ಪುತ್ತೂರಿನಲ್ಲಿ ಆಮಂತ್ರಣ

ಪುತ್ತೂರು: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು ಮತ್ತು ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಬಿ ಟೀಂ ಅಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ. ಮತ್ತು ಅವರ ಕುಟುಂಬದವರು ಸುಬ್ರಹ್ಮಣ್ಯದ ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥದ ಯಾತ್ರೆ ಮತ್ತು ಸಮರ್ಪಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪುತ್ತೂರಿನಲ್ಲಿ ವಿತರಿಸಿ ಆಹ್ವಾನಿಸುವ ಕಾರ್ಯ ನಡೆಯಿತು.

ನಮಗೆ ಸಿಕ್ಕಿದ ಅವಕಾಶ ಸಮಾಜಕ್ಕೆ ಸಲ್ಲಬೇಕು
ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದ ಡಾ. ಕುರುಂಜಿ ವೆಂಕಟ್ರಮಣ ವೇದಿಕೆಯಲ್ಲಿ ನಡೆದ ಔಪಚಾರಿಕ ಕಾರ್ಯಕ್ರಮದಲ್ಲಿ ಡಾ. ಕೆ.ವಿ. ರೇಣುಕಾಪ್ರಸಾದರು ಮಾತನಾಡಿ ಬೆಳ್ಳಿರಥವನ್ನು ನನ್ನ ಕುಟುಂಬದ ಕೈಯಿಂದ ಸ್ವೀಕಾರ ಮಾಡುವ ಅವಕಾಶವನ್ನು ಶ್ರೀ ಸುಬ್ರಹ್ಮಣ್ಯ ದೇವರು ನೀಡಿದ್ದು ಪರಮಪ್ರಸಾದ ಸ್ವರೂಪಿಯಾಗಿದೆ ಎಂದರು. ನನ್ನ ಕುಟುಂಬಕ್ಕೆ ದೊರೆತ ಈ ಅವಕಾಶ ಸಮಾಜದ ವಿವಿಧ ಮಗ್ಗುಲುಗಳ ಜನರ ಶುಭ ಹಾರೈಕೆಯಿಂದಲೇ ಸಾಧ್ಯವಾಗಿರುವುದರಿಂದ ಸಮಾಜದ ಎಲ್ಲರನ್ನೂ ಆಹ್ವಾನಿಸುವುದು ನನ್ನ ಧರ್ಮವೆಂದು ಬಗೆದಿದ್ದೇನೆ ಎಂದು ಅವರು ವಿನೀತರಾಗಿ ನುಡಿದು ಎಲ್ಲರನ್ನೂ ಆಹ್ವಾನಿಸಿದರು.

ಬೆಳ್ಳಿ ರಥ ಸಮರ್ಪಣ ಯಾತ್ರೆಯ ಸ್ವರೂಪ
ಸಮರ್ಪಣೆಗೊಳ್ಳಲಿರುವ ರಥದ ಯಾತ್ರೆಯ ವಿವರ ನೀಡಿದ ಡಾ. ರೇಣುಕಾಪ್ರಸಾದ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಜ್ಯೋತಿ ಆರ್. ಪ್ರಸಾದ್ ಅವರು ಮಾತನಾಡಿ ಕೋಟೇಶ್ವರದ ಶ್ರೀ ಬಿ. ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ಅವರ ಪುತ್ರ ಶ್ರೀ ರಾಜಗೋಪಾಲ ಆಚಾರ್ಯ ಅವರು ನಿರ್ಮಿಸಿಕೊಟ್ಟ ರಥವನ್ನು ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ತರುವ ಯಾತ್ರೆಯ ವಿವರವನ್ನು ತಿಳಿಸಿದರು.
• ದಿನಾಂಕ 03.11.2025ನೇ ಸೋಮವಾರ ರಾತ್ರಿ ಗಂಟೆ 8ಕ್ಕೆ ಕೋಟೇಶ್ವರದಲ್ಲಿ ಗುತ್ತಿಪೂಜೆ ಮತ್ತು ಶಿಲ್ಪಿಗಳಿಂದ ರಥ ಹಸ್ತಾಂತರ.
• ದಿನಾಂಕ 04.11.2025ನೇ ಮಂಗಳವಾರ ಪೂರ್ವಾಹ್ನ ಗಂಟೆ 8ಕ್ಕೆ ಕೋಟೇಶ್ವರದಿಂದ ಹೊರಟು, ಸಂಜೆ ಗಂಟೆ 4ಕ್ಕೆ ಪುತ್ತೂರಿಗೆ ಬಂದು ಸುಳ್ಯದಲ್ಲಿ ತಂಗುವುದು.
• ದಿನಾಂಕ 05.11.2025ನೇ ಬುಧವಾರ ಪೂರ್ವಾಹ್ನ ಗಂಟೆ 9ಕ್ಕೆ ಸುಳ್ಯದಿಂದ ಹೊರಟು ಸುಬ್ರಹ್ಮಣ್ಯಕ್ಕೆ ತಲುಪುವುದು.
• ದಿನಾಂಕ 09.11.2025ನೇ ಆದಿತ್ಯವಾರ ಸಂಜೆ ಗಂಟೆ 6ರಿಂದ ರಥಕ್ಕೆ ವಿವಿಧ ಪೂಜೆಗಳು.
• ದಿನಾಂಕ 10.11.2025ನೇ ಮಂಗಳವಾರ ಪೂರ್ವಾಹ್ನ ಗಂಟೆ 11ಕ್ಕೆ ರಥವನ್ನು ಶ್ರೀ ದೇವರಿಗೆ ಸಮರ್ಪಿಸುವುದು.
• ದಿನಾಂಕ 10.11.2025ನೇ ಮಂಗಳವಾರ ರಾತ್ರಿ ಗಂಟೆ 8ಕ್ಕೆ ಡಾ. ರೇಣುಕಾಪ್ರಸಾದ್ ಕೆ.ವಿ. ಮತ್ತು ಕುಟುಂಬದವರಿಂದ ನೂತನ ಬೆಳ್ಳಿರಥಕ್ಕೆ ಪ್ರಥಮ ಸೇವೆ.





















































 
 

ವೇದಿಕೆಯಲ್ಲಿದ್ದ ಪುತ್ತೂರಿನ ಪೂರ್ವ ಶಾಸಕರಾದ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸೇವಾ ಸಂಘದ ಪೂರ್ವಾಧ್ಯಕ್ಷ ಚಿದಾನಂದ ಬೈಲಾಡಿ, ಹಾಲಿ ಅಧ್ಯಕ್ಷ ರವಿ ಮುಂಗ್ಲಿಮನೆ, ಸಲಹೆಗಾರ ಯು.ಪಿ. ರಾಮಕೃಷ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ವಾರಿಜಾ ಕಾಣಿಚ್ಚಾರು ಮತ್ತು ನಿಯೋಜಿತ ಅಧ್ಯಕ್ಷ ಸುಂದರ ಗೌಡ ನಡುಬೈಲು ಹಾಗೂ ಸಭೆಯಲ್ಲಿದ್ದ ಪುರುಷೋತ್ತಮ ಮುಂಗ್ಲಿಮನೆ, ಡಾ. ಶ್ರೀಧರ ಗೌಡ ಪಾಣತ್ತಿಲ, ಪ್ರೇರಣಾ ಪುತ್ತೂರು ಇದರ ನಿರ್ದೇಶಕ ಪ್ರವೀಣ್ ಕುಂಟ್ಯಾನ, ಜಿನ್ನಪ್ಪ ಮಳುವೇಲು, ಕೋಕೋಮಿತ್ರ ಗಾಣದ ತೆಂಗಿನೆಣ್ಣೆ ಕಾರ್ಖಾನೆಯ ಮ್ಹಾಲಕ ನಾಗೇಶ್ ಕೆಡೆಂಜಿ, ಭಾರತೀಯ ಜೀವವಿಮಾ ನಿಗಮದ ನಿವೃತ್ತ ಮ್ಯಾನೇಜರ್ ವಿಶ್ವನಾಥ ಗೌಡ ಮಾಡಾವು, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ನ ನಿರ್ದೇಶಕ ಸೀತಾರಾಮ ಕೇವಳ ಮುಂತಾದ ಅನೇಕರಿಗೆ ಆಮಂತ್ರಣವನ್ನು ಖುದ್ದು ಡಾ. ರೇಣುಕಾಪ್ರಸಾದರೇ ವಿತರಿಸಿದರು.

ಸಂಖ್ಯೆ ಮತ್ತು ಸಮಯ ಮುಖ್ಯ – ಸಂಜೀವ ಮಠಂದೂರು
ಬೆಳ್ಳಿರಥ ಲೋಕಾರ್ಪಣ ಕಾರ್ಯದಲ್ಲಿ ನಾವು ಪುತ್ತೂರಿನವರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ನೀಡಬೇಕು. ಭಾಗವಹಿಸುವಿಕೆಯಲ್ಲಿ ಸಮಯದ ಪಾಲನೆಯೂ ಮುಖ್ಯವಾಗಬೇಕು ಎಂದು ಪೂರ್ವ ಶಾಸಕರಾದ ಸಂಜೀವ ಮಠಂದೂರು ಅಭಿಪ್ರಾಯಪಟ್ಟರು.

ನೀಡುವ ಭಾಗ್ಯವಿಲ್ಲದಿದ್ದರೂ ನೋಡುವ ಭಾಗ್ಯ ನಮ್ಮದಾಗಿದೆ – ಚಿದಾನಂದ ಬೈಲಾಡಿ
ಬೆಳ್ಳಿರಥ ಲೋಕಾರ್ಪಣೆಯಂತಹ ಬೃಹತ್ ಕಾರ್ಯವನ್ನು ಕೈಗೆತ್ತಿಕೊಳ್ಳುವ ಭಕ್ತಿಪೂರ್ವಕ ಮನಸ್ಸು ಮಾಡಿದ ಡಾ. ರೇಣುಕಾಪ್ರಸಾದರಿಗೆ ನಾವೆಲ್ಲ ಚಿರಋಣಿಯಾಗಿದ್ದೇವೆ. ನಮಗೆ ಅಂತಹ ಸೇವೆಯನ್ನು ನೀಡುವ ಭಾಗ್ಯವಿಲ್ಲದಿದ್ದರೂ ಅದನ್ನು ನೋಡುವ ಭಾಗ್ಯವನ್ನು ಅವರು ನಮಗೆ ದಯಪಾಲಿಸಿದ್ದಾರೆ. ಡಾ. ಕುರುಂಜಿ ವೆಂಕಟ್ರಮಣ ಗೌಡರು ನಡೆದ ವಿದ್ಯೆ, ದಾನ ಮತ್ತು ಸೇವೆ ಎಂಬ ತ್ರಿವಳಿ ಮಂತ್ರಗಳನ್ನು ಅವರ ಸುಪುತ್ರರಾದ ಇವರು ಇರಿಸಿಕೊಂಡ ಫಲವಾಗಿಯೇ ಇಂದು ಬೆಳ್ಳಿರಥ ಸಮರ್ಪಣ ಸೇವೆ ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆಯವರು ಸ್ವಾಗತಿಸಿ ವಂದನಾರ್ಪಣೆಗೈದರು. ಭವಾನಿಶಂಕರ ಅಡ್ತಲೆ, ಭರತ್ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!
Scroll to Top