ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌

ಉಪ್ಪಳಿಗೆಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎಫ್‌ಐಆರ್‌

ಪುತ್ತೂರು : ಕೋಮು ದ್ವೇಷದ ಭಾಷಣ ಮಾಡಿದ ಆರೋಪ ಹಿನ್ನೆಲೆಯಲ್ಲಿ ಆರ್​​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ 118/2025ಕ್ಕೆ ಸಂಬಂಧಿಸಿದಂತೆ ಅ.30ರಂದು ಕಲಂ 35 (3 )ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಅಡಿಯಲ್ಲಿ ವಿಚಾರಣೆಗೆ ಹಾಜರಾಗಲು ಪ್ರಭಾಕರ ಭಟ್ ಮನೆಗೆ ನೋಟಿಸ್ ಜಾರಿ ಮಾಡಲಾಗಿದೆ. ಈಶ್ವರಿ ಪದ್ಮುಂಜ ಎಂಬವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 79, 196, 290, 302, ಹಾಗೂ 3(5) ಕಲಂ ಅಡಿ ಪ್ರಕರಣ ದಾಖಲಾಗಿದೆ.

ಪುತ್ತೂರು ತಾಲೂಕಿನ ಉಪ್ಪಳಿಗೆಯಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಪ್ರಭಾಕರ್​ ಭಟ್, ಧಾರ್ಮಿಕ ದ್ವೇಷ, ಮಹಿಳೆಯರ ಘನತೆಗೆ ಧಕ್ಕೆ ತರುವ ಭಾಷಣ ಮಾಡಿರುವುದಾಗಿ ಆರೋಪಿಸಿ ದೂರು ನೀಡಲಾಗಿದೆ. ಆರ್​​ಎಸ್​​ಎಸ್​​ ಪ್ರತಿನಿಧಿಯಾದ ಪ್ರಭಾಕರ ಭಟ್ ಅವರು ಆಡಿರುವ ಮಾತುಗಳು ಖಾಸಗಿ ನ್ಯೂಸ್ ಯೂಟ್ಯೂಬ್ ಚಾನೆಲ್​​​ನಲ್ಲಿ ಪ್ರಸಾರವಾಗಿದೆ. ಈ ರೀತಿ ಇಲೆಕ್ಟ್ರಾನಿಕ್ ವಿಧಾನಗಳ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ BNS 299 ಪ್ರಕಾರ ಅಪರಾಧವಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.





















































 
 

ಪ್ರಭಾಕರ ಭಟ್ ಅವರು ಈ ಹಿಂದೆಯೂ ಹಲವು ಬಾರಿ ಧರ್ಮಗಳನ್ನು ಎತ್ತಿಕಟ್ಟುವ, ಕೋಮುಗಲಭೆ ಮಾಡಿಸುವ ಕೃತ್ಯಗಳನ್ನು ನಡೆಸಿದ್ದಾರೆ. ಇದು ತಿಳಿದು ಕೂಡ ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮಕ್ಕೆ ಪ್ರಭಾಕರ ಭಟ್ಟರನ್ನು ಭಾಷಣ ಮಾಡಲು ಕರೆಯುವ ಮೂಲಕ ಧಾರ್ಮಿಕ ಕಾರ್ಯಕ್ರಮಕ್ಕೆ ಕರೆದು ಒಂದು ವರ್ಗದ ಜನರ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಅಥವಾ ಆ ಕೃತ್ಯವನ್ನು ಅವಮಾನ ಮಾಡಲೆಂದೇ ಬಗೆದು, ಧಾರ್ಮಿಕ ಸ್ಥಳವನ್ನು ಅಪವಿತ್ರ ಮಾಡುವ ಕೃತ್ಯವನ್ನು BNS 298ರಂತೆ ಕಾರ್ಯಕ್ರಮದ ಆಯೋಜಕರು ಮತ್ತು ಕಲ್ಲಡ್ಕ ಪ್ರಭಾಕರ ಭಟ್ಟರು ಜಂಟಿಯಾಗಿ ಮಾಡಿದ್ದಾರೆ. ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶಪೂರ್ವಕ ಉದ್ದೇಶದಿಂದ ಪದಗಳನ್ನು ಉಚ್ಚರಿಸುವುದು ಅಥವಾ ಸನ್ನೆಗಳನ್ನು ಮಾಡುವ ಕೃತ್ಯವನ್ನು ಪ್ರಭಾಕರ ಭಟ್ ಮಾಡುವ ಮೂಲಕ BNS 302 ಪ್ರಕಾರ ಕೃತ್ಯವೆಸಗಿದ್ದಾರೆ. ಆದ್ದರಿಂದ ಈ ರೀತಿಯ ದ್ವೇಷಭಾಷಣಗಳು ಮರುಕಳಿಸದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

error: Content is protected !!
Scroll to Top