ಭಾರತದ 53ನೇ ಸಿಜೆಐಗೆ ಆಗಿ ನವೆಂಬರ್ನಲ್ಲಿ ಅಧಿಕಾರ ಸ್ವೀಕಾರ
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ನವೆಂಬರ್ನಲ್ಲಿ ನಿವೃತ್ತಿ ಹೊಂದಲಿದ್ದು, ನ್ಯಾ.ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಗವಾಯಿ ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನಿವೃತ್ತಿಯ ನಂತರ ಅವರು ಈ ಹುದ್ದೆಯನ್ನು ವಹಿಸಿಕೊಂಡಿದ್ದರು.
ಸಿಜೆಐ ಗವಾಯಿ ಅವರು ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಹಿರಿತನದ ಆಧಾರದ ಮೇಲೆ ನ್ಯಾಯಮೂರ್ತಿ ಸೂರ್ಯಕಾಂತ್ ಭಾರತದ 53ನೇ ಸಿಜೆಐ ಆಗಲಿದ್ದಾರೆ. ಸರ್ಕಾರ ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಲಿದೆ. ನ್ಯಾಯಮೂರ್ತಿ ಸೂರ್ಯಕಾಂತ್ ಸುಮಾರು 14 ತಿಂಗಳುಗಳ ಕಾಲ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲಿದ್ದು, ಫೆಬ್ರವರಿ 9, 2027ರಂದು ನಿವೃತ್ತರಾಗಲಿದ್ದಾರೆ.
ಫೆಬ್ರವರಿ 10, 1962ರಂದು ಜನಿಸಿದ ನ್ಯಾಯಮೂರ್ತಿ ಸೂರ್ಯಕಾಂತ್, 1981ರಲ್ಲಿ ಹರ್ಯಾಣದ ಹಿಸಾರ್ನಲ್ಲಿರುವ ಸರ್ಕಾರಿ ಸ್ನಾತಕೋತ್ತರ ಕಾಲೇಜಿನಿಂದ ಪದವಿ ಪಡೆದರು ಮತ್ತು 1984ರಲ್ಲಿ ರೋಹ್ಟಕ್ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ಪೂರ್ಣಗೊಳಿಸಿದರು. 1984ರಲ್ಲಿ ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಮುಂದಿನ ವರ್ಷ ಚಂಡೀಗಢದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ಸೇರಿದರು.
ಅವರು 2000ರಲ್ಲಿ ಹರಿಯಾಣದ ಅಡ್ವೊಕೇಟ್ ಜನರಲ್ ಆದರು ಮತ್ತು 2001ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ಅದೇ ವರ್ಷ, ಅವರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ನ ನ್ಯಾಯಾಧೀಶರಾದರು. ನಂತರ ಅವರನ್ನು 2018ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು ಮತ್ತು 2019ರಲ್ಲಿ ಸುಪ್ರೀಂ ಕೋರ್ಟ್ಗೆ ಬಡ್ತಿ ನೀಡಲಾಯಿತು.
ಸುಪ್ರೀಂ ಕೋರ್ಟ್ನಲ್ಲಿ ಅವರ ಅಧಿಕಾರಾವಧಿಯಲ್ಲಿ ಅವರು 370ನೇ ವಿಧಿಯನ್ನು ರದ್ದುಗೊಳಿಸುವುದರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯುವ ಸಂವಿಧಾನ ಪೀಠದ ನಿರ್ಧಾರ ಸೇರಿದಂತೆ ಹಲವಾರು ಪ್ರಮುಖ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಂವಿಧಾನ, ಮಾನವ ಹಕ್ಕುಗಳು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಸಾವಿರಕ್ಕೂ ಹೆಚ್ಚು ನಿರ್ಧಾರಗಳಿಗೆ ಅವರು ಕೊಡುಗೆ ನೀಡಿದ್ದಾರೆ.
























