ಚೀನದಲ್ಲಿ ಸಾಯಿಸಲು ಸಂಚು ಮಾಡಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗ
ರಷ್ಯಾ ಅಧ್ಯಕ್ಷ ಪುಟಿನ್ ಅವರಿಂದ ವಿಫಲಗೊಂಡಿತು ಸಂಚು
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ನಡೆದಿತ್ತಾ ಸಂಚು? ಹೀಗೊಂದು ಸುದ್ದಿ ನಿನ್ನೆಯಿಂದೀಚೆಗೆ ಭಾರಿ ಸದ್ದು ಮಾಡುತ್ತಿದೆ. ಕಳೆದ ತಿಂಗಳು ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.
ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ವಿರುದ್ಧ ಇಂಥಹದ್ದೊಂದು ಆರೋಪ ಕೇಳಿಬರುತ್ತಿದ್ದು, ಈ ಕುರಿತಂತೆ ಸಾಕಷ್ಟು ಮಾಧ್ಯಮಗಳು ವರದಿಗಳನ್ನು ಪ್ರಕಟಿಸುತ್ತಿವೆ. ಅಮೆರಿಕ ಭಾರತದ ಮೇಲೆ ರಷ್ಯಾ ತೈಲ ಖರೀದಿಸದಂತೆ ಒತ್ತಡ ಹೇರುತ್ತಿರುವುದು ಹಾಗೂ ಭಾರತದ ಕೃಷಿ, ಹಾಲಿನ ಮಾರುಕಟ್ಟೆಯನ್ನು ತನಗೆ ಮುಕ್ತ ಮಾಡಿಕೊಡಬೇಕೆಂಬ ಬೇಡಿಕೆಗೆ ಭಾರತ ಈ ವರೆಗೂ ಬಗ್ಗದೆ ಇರುವ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತ-ಅಮೆರಿಕ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿರುವುದರ ನಡುವೆಯೇ ಈ ವರದಿ ಪ್ರಕಟವಾಗಿರುವುದು ಸಾಕಷ್ಟು ಊಹಾಪೋಹ, ಚರ್ಚೆಗಳಿಗೆ ಕಾರಣವಾಗಿದೆ.
ಅಮೆರಿಕದ ಸುಂಕ ಬೆದರಿಕೆಗಳ ಬೆನ್ನಲ್ಲೇ ಭಾರತ-ಚೀನಾ ಸಂಬಂಧದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತ್ತು ಅದಷ್ಟೇ ಅಲ್ಲದೇ ರಷ್ಯಾ-ಭಾರತ-ಚೀನ ಒಗ್ಗೂಡಿರುವುದನ್ನು ಸಹಿಸದ ದೇಶವೊಂದು ಮೋದಿ ಹತ್ಯೆಗೆ ಸಂಚು ರೂಪಿಸಿದೆ ಎಂದು ಈ ವರದಿಗಳನ್ನು ಆಧರಿಸಿ ವಿಶ್ಲೇಷಿಸಲಾಗುತ್ತಿದೆ.
ಇಷ್ಟೆಲ್ಲಾ ಮಾಹಿತಿಗಳು ಬಹಿರಂಗಗೊಳ್ಳುತ್ತಿರುವುದಕ್ಕೆ ಕಾರಣವಾಗಿರುವುದು ಢಾಕಾದಲ್ಲಿ ನಿಯೋಜಿಸಲಾಗಿದ್ದ ಅಮೆರಿಕದ ವಿಶೇಷ ಪಡೆಗಳ ಅಧಿಕಾರಿ ಟೆರೆನ್ಸ್ ಅರ್ವೆಲ್ಲೆ ಜಾಕ್ಸನ್ ಆಗಸ್ಟ್ 31ರಂದು ಶವವಾಗಿ ಪತ್ತೆಯಾಗಿರುವುದಾಗಿದೆ. ಈ ವ್ಯಕ್ತಿಯನ್ನು ಅಮೆರಿಕ ಮ್ಯಾನ್ಮಾರ್ನಲ್ಲಿ ಅರಾಕನ್ ಆರ್ಮಿಗೆ ಬಾಂಗ್ಲಾ ನೆರವು ನೀಡಲು ನಿಯೋಜಿಸುವ ನೆಪದಲ್ಲಿ ಸಕ್ರಿಯವಾಗಿರಿಸಿತ್ತು. ಈ ನಿಗೂಢ ಸಾವು ಸಿಐಎ ಹೆಜ್ಜೆ ಗುರುತು ಹಾಗೂ ಚೀನದಲ್ಲಿ ಮೋದಿ ಹತ್ಯೆಯ ಸಂಚಿನ ಯೋಜನೆಯನ್ನು ಬಿಚ್ಚಿಡುತ್ತಿದೆ ಎಂದು ವರದಿಗಳು ಹೇಳುತ್ತಿವೆ.
ಸಿಐಎ ವಿರುದ್ಧದ ಆರೋಪ ಮತ್ತೊಂದು ತಾಷ್ಕೆಂಟ್ ಘಟನೆಯಂತೆ ಮಾಡುವ ಪ್ರಯತ್ನ ಎಂದೇ ವ್ಯಾಪಕವಾಗಿ ವಿಶ್ಲೇಷಿಸಲಾಗುತ್ತಿದೆ. ಚೀನದ ನೆಲದಲ್ಲಿ ಭಾರತದ ಪ್ರಧಾನಿಯನ್ನು ಹತ್ಯೆ ಮಾಡಿದರೆ, ಶಾಶ್ವತವಾಗಿ ಚೀನ-ಭಾರತವನ್ನು ದೂರ ಮಾಡುವ ಮತ್ತು ಭಾರತದಲ್ಲಿ ಈಗಿನ ದೃಢ ಸರ್ಕಾರವನ್ನು ತೆಗೆದು ಅರಾಜಕತೆ ಉಂಟುಮಾಡಿ ತನ್ನ ಮಾತು ಕೇಳುವ ಸರ್ಕಾರವನ್ನು ಸ್ಥಾಪಿಸಬಹುದು ಎಂಬುದು ಈ ಯೋಜನೆಯ ಹಿಂದಿನ ಲೆಕ್ಕಾಚಾರವಾಗಿತ್ತು ಆದರೆ ರಷ್ಯಾ- ಭಾರತ ಜಂಟಿಯಾಗಿ ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದವು ಎಂದು ಹೇಳಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಬಂದಿದ್ದ ಏಜೆಂಟ್ ಅತ್ಯಂತ ನಿಗೂಢವಾಗಿ ಬಾಂಗ್ಲಾದೇಶದ ಹೊಟೆಲ್ನಲ್ಲಿ ಸಾವಿಗೀಡಾಗಿದ್ದಾನೆ. ಈ ಮೂಲಕ ಸಿಐಎ ಲೆಕ್ಕಾಚಾರವನ್ನು ಭಾರತದ ರಾ ಸಂಪೂರ್ಣವಾಗಿ ತಲೆಕೆಳಗೆ ಮಾಡಿದೆ. ಇದಕ್ಕೆ ಪೂರಕವೆಂಬಂತೆ ಚೀನದಲ್ಲಿ ನಡೆದ ಕೆಲವು ಘಟನೆಗಳು ಹೊಂದಾಣಿಕೆಯಾಗುತ್ತಿವೆ. ಪ್ರಧಾನಿ ಮೋದಿ ಇದ್ದ ಹೊಟೆಲ್ಗೆ ರಷ್ಯಾ ಅಧ್ಯಕ್ಷ ಪುಟಿನ್ ದಿಢೀರ್ ಭೇಟಿ ನೀಡಿದ್ದು, ಯಾರಿಗೂ ಯವತ್ತೂ ಕಾಯದ ಪುಟಿನ್ ಮೋದಿಗಾಗಿ ಕಾದು ಅವರನ್ನು ತಮ್ಮ ಕಾರಿನಲ್ಲೇ ಶೃಂಗಸಭೆ ನಡೆಯುತ್ತಿದ್ದ ಸ್ಥಳಕ್ಕೆ ಒಟ್ಟಿಗೆ ಕರೆದೊಯ್ದಿದ್ದು, ಇವೆಲ್ಲವೂ ಹತ್ಯೆಯ ಸಂಚನ್ನು ವಿಫಲಗೊಳಿಸಿದ್ದ ಪ್ರತಿತಂತ್ರದ ಭಾಗವೆಂದು ವಿಶ್ಲೇಷಿಸಲಾಗುತ್ತಿದೆ.
ಇದಷ್ಟೇ ಅಲ್ಲದೇ ಪ್ರಧಾನಿ ಮೋದಿ ಅವರು ದೃಢಪಡಿಸಿದ ಮತ್ತೊಂದು ಹೇಳಿಕೆಯು ಮೇಲಿನ ಊಹಾಪೋಹಗಳಿಗೆ ಮತ್ತಷ್ಟು ಬಲವನ್ನು ನೀಡುತ್ತದೆ. ಸೆಪ್ಟೆಂಬರ್ 2ರಂದು ಚೀನದ ಟಿಯಾಂಜಿನ್ನಿಂದ ಹಿಂದಿರುಗಿದ ಮರುದಿನ ಪ್ರಧಾನಿ ಮೋದಿ ನವದೆಹಲಿಯಲ್ಲಿ ನಡೆದ ಸೆಮಿಕಾನ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದ ಸಮಯದಲ್ಲಿ ಅವರು ಮಾಡಿದ ಭಾಷಣದಲ್ಲಿ ಒಗಟಾಗಿತ್ತು. ಅನೇಕ ಮಾಧ್ಯಮ ವೃತ್ತಿಪರರು ಮತ್ತು ಡೊಮೇನ್ ತಜ್ಞರು ಪ್ರಧಾನಿಯವರ ಹೇಳಿಕೆಯ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. “ನಾನು ಚೀನಾಕ್ಕೆ ಹೋಗಿದ್ದರಿಂದ ನೀವು ಚಪ್ಪಾಳೆ ತಟ್ಟುತ್ತಿದ್ದೀರಾ ಅಥವಾ ನಾನು ಹಿಂತಿರುಗಿದ್ದರಿಂದ ನೀವು ಚಪ್ಪಾಳೆ ತಟ್ಟುತ್ತಿದ್ದೀರಾ?” ಎಂದು ಪ್ರಧಾನಿ ಮೋದಿ ಗೂಢಾರ್ಥದಲ್ಲಿ ಕೇಳಿದರು. ವಿಶ್ಲೇಷಕರ ಪ್ರಕಾರ, ಪ್ರಧಾನಿ ಮೋದಿಯವರ ಈ ನಿಗೂಢ ಹೇಳಿಕೆಗಳು ಗಂಭೀರ ಸಂದೇಶವಾಗಿತ್ತು. ಇದು ಪ್ರಧಾನಿ ಎದುರಿಸುತ್ತಿರುವ ಜೀವ ಬೆದರಿಕೆಗಳ ಬಗ್ಗೆ ಸಂದೇಶಗಳನ್ನು ಒಳಗೊಂಡಿತ್ತು ಎಂದು ಹೇಳಲಾಗುತ್ತಿದೆ.
























