ಸುಬ್ರಹ್ಮಣ್ಯ: ನವೆಂಬರ್ 10 ರಂದು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ನಮ್ಮ ಕುಟುಂಬದ ವತಿಯಿಂದ ಬೆಳ್ಳಿ ರಥ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ಬಿ ಇದರ ಅಧ್ಯಕ್ಷ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ. ವಿ. ತಿಳಿಸಿದ್ದಾರೆ.
ಕೆ.ವಿ.ಜಿ. ಡೆಂಟಲ್ ಕಾಲೇಜು ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ಳಿ ರಥ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿದೆ. ನವೆಂಬರ್ 3 ರಂದು ಕೋಟೇಶ್ವರದಿಂದ ಹೊರಟು ನ. 4 ರಂದು ಸುಳ್ಯಕ್ಕೆ, ನ. 5 ರಂದು ಸುಬ್ರಹ್ಮಣ್ಯಕ್ಕೆ ಆಗಮಿಸಲಿದೆ ಎಂದು ತಿಳಿಸಿದ್ದಾರೆ.
ನಮ್ಮೆಲ್ಲರ ಸಂಕಲ್ಪದಂತೆ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ಮಾಡುವ ಬಗ್ಗೆ ರಥ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಕೋಟೇಶ್ವರ ಬಿ. ಲಕ್ಷ್ಮೀನಾರಾಯಣ ಆಚಾರ್ಯರು ಮತ್ತು ಪುತ್ರ ರಾಜಗೋಪಾಲಾಚಾರ್ಯ ಅವರು ನಿರ್ಮಿಸಿಕೊಟ್ಟ ಬೆಳ್ಳಿರಥವು ದೇವರ ಸಮರ್ಪಣೆಗೆ ಸಿದ್ಧವಾಗಿದೆ. ನ.10ರಂದು ಶಾಸ್ತ್ರೋಕ್ತವಾಗಿ ಸಮರ್ಪಣೆ ಮಾಡಲಾಗುತ್ತದೆ. ನ.9 ರಂದು ಸಂಜೆ 6ರಿಂದ ವಾಸ್ತು ರಕ್ಷೆೋಘ್ನ ಹೋಮ ಶುದ್ಧಿ ಕಲಶ, ವಾಸ್ತು ಬಲಿ ಮತ್ತು ವಾಸ್ತು ಪೂಜೆ ನಡೆಯಲಿದೆ. ನ.10ರಂದು ಬೆಳಗ್ಗೆ 7ರಿಂದ ಸುಬ್ರಹ್ಮಣ್ಯ ಹೋಮ, ಪವಮಾನ ಹೋಮ ಪೂರ್ವಾಹ್ನ ಗಂಟೆ 11ಕ್ಕೆ ಪೂರ್ಣಾಹುತಿಗೊಂಡು, ನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಅದೇ ದಿನ ರಾತ್ರಿ 8ರಂದು ಪ್ರಥಮ ಬೆಳ್ಳಿರಥ ಸೇವೆಯನ್ನು ನೆರವೇರಿಸಲು ನಿಶ್ಚಯಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ಮಾಡುವ ಮೊದಲು ರಥ ಶಿಲ್ಪಿ ಕೋಟೇಶ್ವರ ಬಿ.ಲಕ್ಷ್ಮೀ ನಾರಾಯಣ ಆಚಾರ್ಯರು ಮತ್ತು ಪುತ್ರ ರಾಜಗೋಪಾಲ ಆಚಾರ್ಯರು ನಿರ್ಮಿಸಿಕೊಟ್ಟ ಬೆಳ್ಳಿರಥಕ್ಕೆ ಗುತ್ತಿಪೂಜೆ ನಡೆದು ಶಾಸ್ತೋಕ್ತವಾಗಿ ಬಿಟ್ಟುಕೊಡುವ ಕಾರ್ಯಕ್ರಮ ನ.3ರಂದು ರಾತ್ರಿ ನಡೆಯಲಿದೆ. ನ.4ರಂದು ಬೆಳಿಗ್ಗೆ 8ಕ್ಕೆ ಬೆಳ್ಳಿರಥ ಯಾತ್ರೆ ಆರಂಭಗೊಳ್ಳಲಿದೆ. ಕುಂಭಾಶಿ-ಉಡುಪಿ- ಸುರತ್ಕಲ್- ಮಂಗಳೂರು- ಬಿಸಿ ರೋಡ್-ಕಬಕ-ಪುತ್ತೂರು- ಕುಂಬ್ರ- ಕನಕಮಜಲು- ಜಾಲ್ಸೂರು ಪೈಚಾರ್ ಮೂಲಕ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಾಗತವನ್ನು ಸ್ವೀಕರಿಸಿ ಸಾಯಂಕಾಲ ಸುಳ್ಯಕ್ಕೆ ಆಗಮಿಸಲಿದೆ. ಪೈಚಾರು ಬಳಿ ಪೂರ್ಣಕುಂಭದ ಮೂಲಕ ಸ್ವಾಗತಿಸಲ್ಪಟ್ಟು ಸಿಂಗಾರಿಮೇಳ, ಭಜನಾ ತಂಡ ಹಾಗೂ ವಿವಿಧ ಸಾಂಸ್ಕೃತಿಕ ವೈಭವದೊಂದಿಗೆ ಭವ್ಯವಾದ ಮೆರವಣಿಗೆ ಮೂಲಕ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ಬರುವುದು. ಬಳಿಕ ಅಮರಶ್ರೀ ಕಾಂತಮಂಗಲದ ಮೂಲಕ ಹಾದು ಹೋಗಿ ಶ್ರೀ ಕ್ಷೇತ್ರ ಗುತ್ಯಮ್ಮನ ಸನ್ನಿಧಿಯಲ್ಲಿ ರಾತ್ರಿ ತಂಗಲಿದೆ. ನ.5ರಂದು ಪೂ.8ರಂದು ಶ್ರೀ ಗುತ್ಯಮ್ಮ ಕ್ಷೇತ್ರದಿಂದ ಹೊರಟು ಬೆಳ್ಳಿರಥ ಯಾತ್ರೆ ಕೆವಿಜಿ ಸರ್ಕಲ್ ಬಳಿಯೊಂದ ವಿವಿಧ ವೈಧಿಕ ಮತ್ತು ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೊರಡಲಿದೆ. ಸಿಂಗಾರಿ ಮೇಳ, ಭಜನಾ ತಂಡಗಳು, ಚೆಂಡೆ ವಾದ್ಯ ಮೇಳಗಳು, ಸ್ಯಾಕ್ರೋಫೋನ್, ಚೆಂಡೆ ವಾದ್ಯ ಮೇಳಗಳು ಮೆರವಣಿಗೆಗೆ ಸಾಥ್ ನೀಡಲಿದೆ.
ಬೆಳ್ಳಿರಥ ಯಾತ್ರೆಯ ಸಂದರ್ಭದಲ್ಲಿ ಹಾದು ಹೋಗುವ ವಿವಿಧ ಧಾರ್ಮಿಕ ಕ್ಷೇತ್ರಗಳ ಹಾಗೂ ವಿವಿಧ ಗ್ರಾಮಗಳ ಭಕ್ತರ ಸ್ವಾಗತದೊಂದಿಗೆ ವೈಭವದ ಬೆಳ್ಳಿರಥ ಯಾತ್ರೆ ಮುಂದುವರಿದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಲಿದೆ. ರಥ ಸಮರ್ಪಣೆ ಸಂದರ್ಭದಲ್ಲಿ ಮತ್ತು ರಥಯಾತ್ರೆ ಸಂದರ್ಭದಲ್ಲಿ ಭಕ್ತರಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಡಾ. ರೇಣುಕಾ ಪ್ರಸಾದ್ ಕೆ.ವಿ.ಎಂದು ಅವರು ವಿನಂತಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್, ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪಾಂಶುಪಾಲ ಸುರೇಶ್ ವಿ ಕೆವಿಜಿ ಐಟಿಐ ಪ್ರಾಂಶುಪಾಲ ದಿನೇಶ್ ಮಡ್ತಿಲ, ಕೆವಿಜಿ ಡೆಂಟಲ್ ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ, ಕಮಲಾಕ್ಷ ನಂಗಾರು, ಜಯಂತ ತಳೂರು ಮೊದಲಾದವರು ಉಪಸ್ಥಿತರಿದ್ದರು.
























