ಅ.27ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕ್ರೀಡಾಕೂಟಕ್ಕೆ ಚಾಲನೆ
ಮಂಗಳೂರು: ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಅಂತಾರಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ “ಮಂಗಳೂರು ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್ 2025” ಕ್ರೀಡಾಕೂಟ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 27ರಂದು ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ನೀಡಲಿದ್ದಾರೆ.
ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿದ್ದು, ಯಾವುದೇ ಲೋಪವಾಗದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜಿಲ್ಲೆಯ ಕ್ರೀಡಾ ಮೂಲಸೌಲಭ್ಯಗಳು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಬೇಕು. ಈ ಕ್ರೀಡಾಕೂಟದಲ್ಲಿ ದೇಶ-ವಿದೇಶಗಳಿಂದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅವರಿಗೆ ಕ್ರೀಡಾ ಸೌಲಭ್ಯಗಳು, ವಸತಿ ವ್ಯವಸ್ಥೆಗಳನ್ನು ಉತ್ತಮ ರೀತಿಯಲ್ಲಿ ಒದಗಿಸಬೇಕು. ಕ್ರೀಡಾಂಗಣದ ಒಳಗೆ ಎಲ್ಲ ತಾಂತ್ರಿಕ ಅಂಶಗಳನ್ನು ಅಚ್ಚುಕಟ್ಟುಗೊಳಿಸಬೇಕು. ಕ್ರೀಡಾಪಟುಗಳು ಮತ್ತು ತೀರ್ಪುಗಾರರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ . ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕ್ರೀಡಾಕೂಟಕ್ಕೆ ಬರುವ ವಾಹನಗಳಿಗೆ ಉರ್ವ ಮಾರ್ಕೆಟ್ ಕ್ರೀಡಾಂಗಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣಕ್ಕೆ ಹೋಗಿ ಬರುವ ರಸ್ತೆ ಲೇಡಿಹಿಲ್ನಿಂದ ಉರ್ಬವ ಮಾರ್ಕೆಟ್ವರೆಗೆ ಸೌಂದರ್ಯೀಕರಣಗೊಳಿಸಬೇಕು. ತ್ಯಾಜ್ಯ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ಮಾಡಬೇಕು ಎಂದು ಮಹಾನಗರಪಾಲಿಕೆಗೆ ಸೂಚಿಸಿದರು.
ಈ ಕ್ರೀಡಾಕೂಟದಲ್ಲಿ ಸಂಸ್ಕತಿ ಮತ್ತು ಪ್ರವಾಸೋದ್ಯಮ ಬಿಂಬಿಸುವ ಪ್ರದರ್ಶನ ಹಾಗೂ ಮಾಹಿತಿ ಕೇಂದ್ರ ಸಿದ್ಧಗೊಳಿಸಬೇಕು. ಕ್ರೀಡಾಪಟುಗಳು ಪ್ರವಾಸಿ ತಾಣಗಳಿಗೆ ಹೋಗಲಿಚ್ಛಿಸಿದ್ದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಇಲಾಖೆಗೆ ಸೂಚಿಸಿದ್ದಾರೆ.
ಕ್ರೀಡಾಪಟುಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಆರೋಗ್ಯ ಕೇಂದ್ರವನ್ನು ಕ್ರೀಡಾಂಗಣದಲ್ಲಿ ಸಜ್ಜುಗೊಳಿಸಬೇಕು. ಕ್ರೀಡಾ ವೈದ್ಯಕೀಯ ತಜ್ಞರನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಹಾಗೂ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಅವರು ತಿಳಿಸಿದರು.
























