ಆರ್ಎಸ್ಎಸ್ ಸಹಿತ ಹಲವು ಸಂಘಟನೆಗಳಿಂದ ಪಥ ಸಂಚಲನ ನಡೆಸಲು ಅನುಮತಿ ಕೋರಿಕೆ
ಬೆಂಗಳೂರು: ಕಲಬುರಗಿಯ ಚಿತ್ತಾಪುರದಲ್ಲಿ ನ.2ರಂದು ಆರ್ಎಸ್ಎಸ್ ಸಹಿತ ಹಲವು ಸಂಘಟನೆಗಳು ಪಥ ಸಂಚಲನ ನಡೆಸಲು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಶಾಂತ ಸಭೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಹೈಕೋರ್ಟ್ ಸೂಚಿಸಿದೆ. ಅಕ್ಟೋಬರ್ 28ರಂದು ಉದ್ದೇಶಿತ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್)ದ ರೂಟ್ ಮಾರ್ಚ್ನ ಆಯೋಜಕರೊಂದಿಗೆ ಶಾಂತಿ ಸಭೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಇದರಿಂದ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದ ಆರ್ಎಸ್ಎಸ್ಗೆ ತುಸು ನಿರಾಶೆಯಾಗಿದೆ.
ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ತಹಸೀಲ್ದಾರ್ ಕ್ರಮ ಪ್ರಶ್ನಿಸಿ ಆರ್ಎಸ್ಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಪೀಠ, ಚಿತ್ತಾಪುರ ಪಟ್ಟಣದಲ್ಲಿ ಕೆಲವು ರೀತಿಯ ಉದ್ವಿಗ್ನತೆ ಉಂಟಾಗಿದೆ ಎಂದು ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ಗಮನಿಸಿ, ಅಕ್ಟೋಬರ್ 28ಕ್ಕೆ ಶಾಂತಿ ಸಭೆ ನಡೆಸಬೇಕು. ಅಕ್ಟೋಬರ್ 30ರಂದು ವರದಿ ನೀಡುವಂತೆ ಸೂಚಿಸಿದೆ. ಈ ವರದಿ ಆಧಾರದ ಮೇಲೆ ಹೈಕೋರ್ಟ್ ತೀರ್ಪು ನೀಡಲಿದೆ.
ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಜಿಲ್ಲಾಧಿಕಾರಿ ತಮ್ಮ ವರದಿಯಲ್ಲಿ ಎರಡು ಅಭಿಪ್ರಾಯಗಳನ್ನು ನೀಡಿದ್ದಾರೆ. ಜನರಿಗೆ ತೊಂದರೆಯಾಗುವ ಬಗ್ಗೆ ಕಲಬುರಗಿ ಎಸ್ಪಿ ವರದಿ ನೀಡಿದ್ದಾರೆ. ಪಥಸಂಚಲನದ ಮಾರ್ಗದಲ್ಲಿ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಪರಿಸ್ಥಿತಿ ಸಾಮಾನ್ಯವಾದ ನಂತರ ಪಥಸಂಚಲನ ಸೂಕ್ತ. ಕೆಲ ವಾರಗಳ ಬಳಿಕ ಪಥಸಂಚಲನ ನಡೆಸುವುದು ಸೂಕ್ತವೆಂದು ವರದಿಯಿದೆ. ಇದರಿಂದ ಯಾವುದೇ ಸಂಘಟನೆಗಳಿಗೂ ಅನುಮತಿ ನೀಡದಂತೆ ವರದಿಯಿದೆ ಎಂದು ಹೇಳಿದರು.
ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ಅ.28ರಂದು ಶಾಂತಿ ಸಭೆ ನಡೆಸಿ ಅಕ್ಟೋಬರ್ 30ರಂದು ವರದಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಈ ವರದಿ ಆಧಾರದ ಮೇಲೆ ಹೈಕೋರ್ಟ್ ತೀರ್ಪು ನೀಡಲಿದೆ.
























