ಜನವರಿ ಒಳಗೆ ಸಿಲೆಬಸ್ ಪೂರ್ತಿಯಾಗಲೇಬೇಕು
ಬೆಂಗಳೂರು: ದಸರಾ ರಜೆ, ಜಾತಿ ಗಣತಿ ರಜೆ ಬಳಿಕ ಇಂದಿನಿಂದ ಸರ್ಕಾರಿ ಶಾಲೆಗಳು ಪುನಾರಂಭಗೊಂಡಿವೆ. ಹೆಚ್ಚುಕ ಡಿಮೆ ಒಂದು ತಿಂಗಳ ರಜೆಯ ಬಳಿಕ ಮತ್ತೆ ಶಾಲೆಗಳು ಪ್ರಾರಂಭವಾಗಿವೆ.
ಶಾಲೆ ಮರು ಪ್ರಾರಂಭವಾಗುತ್ತಿದ್ದಂತೆ ಶಾಲೆಗಳಿಗೆ ಶಿಕ್ಷಣ ಇಲಾಖೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿದೆ. ಡಿಸೆಂಬರ್-ಜನವರಿ ಒಳಗೆ ಸಂಪೂರ್ಣ ಸಿಲಬಸ್ ಮುಕ್ತಾಯ ಆಗಬೇಕು, ಒಂದು ತಿಂಗಳು ಆಗಿರುವ ಸಿಲೆಬಸ್ ನಷ್ಟ ತುಂಬಲು ವಿಶೇಷ ತರಗತಿಗಳನ್ನು ನಡೆಸಬೇಕು, ಬೆಳಗ್ಗೆ ಶಾಲೆ ಸಮಯಕ್ಕಿಂತ ಮುಂಚೆ ಅಥವಾ ಸಂಜೆ ಶಾಲೆ ಮುಗಿದ ಮೇಲೆ ವಿಶೇಷ ತರಗತಿ ತೆಗೆದುಕೊಂಡು ಪಠ್ಯ ಪೂರ್ಣ ಮಾಡಬೇಕು, ಶನಿವಾರ ಅರ್ಧ ದಿನದ ಬದಲಾಗಿ ಪೂರ್ಣ ತರಗತಿಗಳನ್ನು ನಡೆಸಿ ಪಠ್ಯ ಪೂರ್ಣ ಮಾಡಬೇಕು, ತೀರಾ ಅಗತ್ಯವಿದ್ದರೆ ರಜಾ ದಿನಗಳಲ್ಲೂ ವಿಶೇಷ ತರಗತಿ ನಡೆಸಿ ಪಠ್ಯ ಬೋಧನೆ ಪೂರ್ಣ ಮಾಡಬೇಕು ಎಂಬ ಸೂಚನೆಗಳನ್ನು ನೀಡಿದೆ.
ಸರ್ವೆಗಾಗಿ ಸರ್ಕಾರ ವಿದ್ಯಾರ್ಥಿಗಳಿಗೆ ರಜೆ ವಿಸ್ತರಣೆ ಮಾಡಿ ಶಿಕ್ಷಕರನ್ನು ಬಳಸಿಕೊಂಡಿತ್ತು. ಸದ್ಯ ಸರ್ವೆ ಕಾರ್ಯ ಮುಂದುವರಿಯುತ್ತಿದ್ದರೂ ಶಿಕ್ಷಕರನ್ನ ಸರ್ವೆ ಕಾರ್ಯದಿಂದ ಬಿಡುಗಡೆ ಮಾಡಲಾಗಿದೆ. ಶಿಕ್ಷಕರನ್ನ ಹೊರತುಪಡಿಸಿ ಉಳಿದವರಿಂದ ಸರ್ವೆ ಕಾರ್ಯ ಮುಂದುವರಿಯುತ್ತಿದೆ. ಈ ಹಿನ್ನೆಲೆ ಇಂದಿನಿಂದ ತರಗತಿಗಳು ಮರು ಪ್ರಾರಂಭವಾಗಿದೆ. ರಜೆಯಲ್ಲಿ ಮಿಸ್ ಆಗಿರುವ ಸಿಲಬಸ್ ಮುಕ್ತಾಯಕ್ಕೆ ಕೆಲವು ಮಹತ್ವದ ಸೂಚನೆಯನ್ನು ಶಿಕ್ಷಣ ಇಲಾಖೆ ನೀಡಿದೆ.
























