ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಕುಸಿತಕ್ಕೆ ಸಾರ್ವಜನಿಕರ ಆಕ್ರೋಶ
ಬೆಂಗಳೂರು: ಪಶ್ಚಿಮ ಬಂಗಾಳ ಮೂಲದ ಮಹಿಳೆ ಮೇಲೆ ಮಂಗಳವಾರ ರಾತ್ರಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈ ಘೋರ ಕೃತ್ಯ ನಗರದಲ್ಲಿ ಭಾರಿ ಕಳವಳಕ್ಕೆ ಕಾರಣವಾಗಿದೆ. ಅಪರಾಧಿಗಳಿಗೆ ಪೊಲೀಸರ ಭಯ ಇಲ್ಲದಂತಾಗಿದೆ ಎಂದು ಜನರು ಾತಂಕ ವ್ಯಕ್ತಪಡಿಸಿದ್ದಾರೆ.
ಬಂಧಿತರನ್ನು ಕಾರ್ತಿಕ್, ಗ್ಲೆನ್ ಮತ್ತು ಸಿಯೋಗ್ ಎಂದು ಗುರುತಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಗಂಗೊಂಡನಹಳ್ಳಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಮಹಿಳೆಯ ಮನೆಯಲ್ಲಿ ಇಬ್ಬರು ಮಹಿಳೆಯರು, ಇಬ್ಬರು ವಯಸ್ಕರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ಇದ್ದರು. ಮನೆಗೆ ಬಂದ ಐವರು ಬಾಗಿಲು ತೆರೆಯುವಂತೆ ಕೇಳಿದರು. ಭಯಗೊಂಡು ಸಂತ್ರಸ್ತೆ ಬಾಗಿಲು ತೆರೆದಿದ್ದಾರೆ. ತಾವು ಪೀಣ್ಯ ಪೊಲೀಸರ ಇನ್ಫಾರ್ಮರ್ಸ್ ಎಂದು ಹೇಳಿಕೊಂಡ ದುಷ್ಕರ್ಮಿಗಳು ನಿಮ್ಮ ಮನೆಯಲ್ಲಿ ಗಾಂಜಾ ಮಾರಾಟ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಆರೋಪಿಸಿ ದಾಳಿಯ ನಾಟಕವಾಡಿದ್ದಾರೆ.
ಮನೆಯಲ್ಲಿದ್ದ ಇಬ್ಬರು ಪುರುಷರನ್ನು ಕಟ್ಟಿಹಾಕಿದ ನಂತರ ಸಂತ್ರಸ್ತ ಮಹಿಳೆಯ 14 ವರ್ಷದ ಮಗ ಹಾಗೂ ಆಕೆಯ ಸ್ನೇಹಿತೆಯ ಮೇಲೂ ಹಲ್ಲೆ ನಡೆಸಿದ್ದಾರೆ. ನಂತರ ಮಹಿಳೆಯನ್ನು ಪಕ್ಕದ ಕೋಣೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯದ ರಾಜಧಾನಿಯಲ್ಲಿ ಕಾಮಾಂಧರ ಅಟ್ಟಹಾಸ ಹೆಚ್ಚಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ರಾಜಧಾನಿ ಬೆಂಗಳೂರು ರೇಪ್ ಸಿಟಿ ಆಗುತ್ತಿದೆ. ಕರುನಾಡು ಗೂಂಡಾ ರಾಜ್ಯವಾಗುತ್ತಿದೆ ಎಂದು ಟೀಕಿಸಿದೆ.
“ಗೊತ್ತಿಲ್ಲದ” ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೆ, ಕೇಳುತ್ತಿಲ್ಲವೇ ನಾರಿಯರ ನರಳಾಟ. ಕೀಚಕರ ಹೆಡೆಮುರಿ ಕಟ್ಟಿ, ಮಹಿಳೆಯರಲ್ಲಿ ಸುರಕ್ಷತೆಯ ಭಾವನೆ ಮೂಡಿಸುವುದು ಯಾವಾಗ ಗೃಹ ಸಚಿವರೇ? ಎಂದು ಪ್ರಶ್ನಿಸಿದೆ.
























