ಐಷಾರಾಮಿ ಬಂಗಲೆಯಲ್ಲಿ ನಡೆಯುತ್ತಿತ್ತು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ
ಮೈಸೂರು : ಭ್ರೂಣ ಪತ್ತೆ ಹಾಗೂ ಹತ್ಯೆ ಜಾಲವೊಂದನ್ನು ಮೈಸೂರಿನಲ್ಲಿ ಪೊಲೀಸರು ಆರೋಗ್ಯ ಇಲಾಖೆ ಸಹಕಾರದಿಂದ ಬಯಲಿಗೆಳೆದಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿ ಓರ್ವ ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂ ಒಂದರ ಕೈವಾಡ ಶಂಕೆ ಕೂಡ ವ್ಯಕ್ತವಾಗಿದ್ದು, ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ತಾಲೂಕು ಮೆಲ್ಲಹಳ್ಳಿ ಗ್ರಾಮದ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡಲಾಗುತ್ತಿತ್ತು. ಈ ಐಷಾರಾಮಿ ಬಂಗಲೆಗೆ ಗರ್ಭಿಣಿ ಮಹಿಳೆಯರನ್ನು ಕರೆದುಕೊಂಡು ಬಂದು ಭ್ರೂಣದ ಲಿಂಗ ಪತ್ತೆ ಕೆಲಸ ಮಾಡಲಾಗುತ್ತಿತ್ತು. ಇದಕ್ಕಾಗಿ ಅವರ ಬಳಿ ಸಾವಿರಾರು ರೂ. ಹಣ ವಸೂಲಿ ಮಾಡಲಾಗುತಿತ್ತು. ಆ ಮನೆಯಲ್ಲಿ ಹಣಕಾಸಿನ ಡೈರಿ ಪತ್ತೆಯಾಗಿದ್ದು ಅದರಲ್ಲಿದ್ದ ಮಾಹಿತಿ ಬೆಚ್ಚಿ ಬೀಳಿಸುವಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷಾಂತರ ರೂ. ವಹಿವಾಟನ್ನು ಡೈರಿಯಲ್ಲಿ ಬರೆದಿಡಲಾಗಿತ್ತು. ಮಾಹಿತಿಗಳ ಪ್ರಕಾರ ಭ್ರೂಣದ ಲಿಂಗ ಪತ್ತೆಗಾಗಿ 25 ಸಾವಿರ ರೂ. ಭ್ರೂಣ ಪತ್ತೆ ಹಚ್ಚಿ ಒಂದು ವೇಳೆ ಅದು ಹೆಣ್ಣು ಭ್ರೂಣವಾದರೆ ಅದರ ಹತ್ಯೆಗೆ 30 ಸಾವಿರ ರೂ ಹಣ ನಿಗದಿ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಕೊಠಡಿಯಲ್ಲಿ ಇದ್ದ ಕಬ್ಬಿಣದ ಲಾಕರ್ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ನಗದು ಪತ್ತೆ ಆಗಿದೆ. ಸ್ಥಳದಲ್ಲಿ ಭ್ರೂಣ ಹತ್ಯೆಗೆ ಬೇಕಾದ ಕಿಟ್ಗಳು, ಔಷಧಿಗಳು ಪತ್ತೆಯಾಗಿದ್ದು, ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ರಾಜ್ಯ ಆರೋಗ್ಯ ಇಲಾಖೆ ಡಿಡಿ ವಿವೇಕ್ ದೊರೈ, ಮಂಡ್ಯ ಡಿಎಚ್ಒ ಮೋಹನ್ ಹಾಗೂ ಮೈಸೂರು ಡಿಎಚ್ಒ ಕುಮಾರಸ್ವಾಮಿ, ಮಂಡ್ಯ ಕುಟಂಬ ಕಲ್ಯಾಣ ಅಧಿಕಾರಿ ಬೆಟ್ಟಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಆರೋಪಿಗಳ ಕೃತ್ಯ ಬಯಲಿಗೆಳೆಯಲು ಗರ್ಭಿಣಿ ಮಹಿಳೆ ಸಹಕಾರವನ್ನು ಪಡೆಯಲಾಗಿದೆ. ವರುಣ ಪೊಲೀಸರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಒಬ್ಬ ಮಹಿಳೆ ಸೇರಿ ಮೂವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಇಬ್ಬರು ಗರ್ಭಿಣಿಯವರು ಕಂಡುಬಂದಿದ್ದು, ಅವರು ಕೂಡ ಭ್ರೂಣ ಲಿಂಗ ಪತ್ತೆಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಅದರಲ್ಲಿ ಓರ್ವ ಮಹಿಳೆಗೆ ಅದಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು, ಈ ಬಾರಿ ಯಾವ ಮಗು ಎಂದು ತಿಳಿದುಕೊಳ್ಳಲು ಬಂದಿದ್ದರು ಎನ್ನಲಾಗಿದೆ. ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆಗಾಗಿ ಬಳಸುತ್ತಿದ್ದ ವೈದ್ಯಕೀಯ ಪರಿಕರ, ಔಷಧಿಗಳನ್ನು ಮನೆಯ ಮುಂದೆಯೇ ವಿಲೇವಾರಿ ಮಾಡಲಾಗಿದೆ. ಕೆಲ ವಸ್ತುಗಳನ್ನು ಅಲ್ಲೇ ಸುಟ್ಟು ಹಾಕಲಾಗಿತ್ತು. ಸಾಮಾನ್ಯವಾಗಿ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆದರೆ ಇಲ್ಲಿ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಸುಟ್ಟು ಹಾಕಲಾಗಿದೆ. ಅರೆಬರೆ ಸುಟ್ಟ ಸ್ಥಿತಿಯಲ್ಲಿ ಎಲ್ಲವೂ ಪತ್ತೆ ಆಗಿದೆ.
























