ಮನೆಯವರು ಮಲಗಿರುವಾಗಲೇ 20 ಲ.ರೂ. ಮೌಲ್ಯದ ಸೊತ್ತು ಕಳವು ಮಾಡಿದ್ದ ಚಾಲಾಕಿಗಳು
ಮಂಗಳೂರು: ನಗರದ ಲಾಲ್ಬಾಗ್ನ ಅಪಾರ್ಟ್ಮೆಂಟ್ವೊಂದರ ಮೂರು ಫ್ಲಾಟ್ಗಳಿಂದ ಮನೆಯವರು ಮಲಗಿರುವಾಗಲೇ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್ ಕಳವುಗೈದ ಪ್ರಕರಣಕ್ಕೆ ಸಂಭಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಸ್ಸಾಂನ ಕಾಚಾರ್ ಜಿಲ್ಲೆಯ ಅಭಿಜಿತ್ ದಾಸ್ (24) ಹಾಗೂ ದೇಬಾ ದಾಸ್ (21) ಎಂದು ಗುರುತಿಸಲಾಗಿದೆ. ಆರೋಪಿ ಅಭಿಜಿತ್ ದಾಸ್ ಎಂಬಾತನ ಮೇಲೆ ಈ ಮೊದಲು ಬೆಂಗಳೂರು ನಗರ ಮತ್ತು ಅಸ್ಸಾಂ ಸೇರಿದಂತೆ ಹಲವು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಅ.19ರಂದು ರಾತ್ರಿ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮ ಲಾಲ್ಬಾಗ್ ಹ್ಯಾಟ್ ಹಿಲ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿರುವಮೂರು ಫ್ಲಾಟ್ಗಳಿಗೆ ನುಗ್ಗಿದ ಕಳ್ಳರು ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ, ರೂ 5000 ನಗದು, 3000 ದಿರ್ಹಂ ವಿದೇಶಿ ಕರೆನ್ಸಿ ಹಾಗೂ ಮೊಬೈಲ್ ಫೋನ್ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ರಿಯಾಜ್ ರಶೀದ್ ಎಂಬವರು ದೂರು ನೀಡಿದ್ದರು.
ಪ್ರಕರಣ ದಾಖಲಾಗಿ ಸುಮಾರು 20 ಗಂಟೆಗಳ ಒಳಗಾಗಿ ಶೀಘ್ರ ಕಾರ್ಯ ಪ್ರವೃತ್ತರಾದ ಪೊಲೀಸರು ಇಬ್ಬರು ಅಂತಾರಾಜ್ಯ ಕಳ್ಳರನ್ನು ಅ.21ರ ಬೆಳಗ್ಗೆ ಬೆಂಗಳೂರು ನಗರ ಪೊಲೀಸರ ಸಹಕಾರದಿಂದ ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ ಕಳ್ಳತನ ಮಾಡಿದ್ದ ಎಲ್ಲಾ ಚಿನ್ನಾಭರಣಗಳನ್ನು, ರೂ 5000 ನಗದು, ಸುಮಾರು 70,000 ರೂ. ಮೌಲ್ಯದ 3000 ದಿರ್ಹಂ ಹಾಗೂ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ.
























