ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು 10 ಕಿ.ಮೀ. ಬೆನ್ನಟ್ಟಿ ಹಿಡಿದ ಪೊಲೀಸರು
ಪುತ್ತೂರು : ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬೆನ್ನಟ್ಟಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಇಂದು ಬೆಳಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಗುಂಡು ಕಾಲಿಗೆ ತಗುಲಿದ ಆರೋಪಿಯನ್ನು ಕೇರಳದ ಕಾಸರಗೋಡಿನ ಅಬ್ದುಲ್ಲಾ (40 ವರ್ಷ) ಎಂದು ಗುರುತಿಸಲಾಗಿದೆ.
ಐಶರ್ ವಾಹನದಲ್ಲಿ 10 ಜಾನುವಾರಗಳನ್ನು ಸಾಗಿಸಲಾಗುತ್ತಿತ್ತು. ಅಬ್ದುಲ್ಲಾ ಈ ವಾಹನದ ಚಾಲಕನಾಗಿದ್ದ. ವಾಹನದಲ್ಲಿ ಇನ್ನೂ ಓರ್ವ ವ್ಯಕ್ತಿ ಇದ್ದ. ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದಾಗ ಆರೋಪಿಗಳು ನಿಲ್ಲಿಸದೆ ಪಲಾಯನ ಮಾಡಲು ಯತ್ನಸಿದ್ದಾರೆ. ಪೊಲೀಸರು ಸುಮಾರು 10 ಕಿ.ಮೀ. ದೂರ ವಾಹನವನ್ನು ಬೆನ್ನಟ್ಟಿಕೊಂಡು ಹೋಗಿದ್ದಾರೆ. ಆರೋಪಿಯು ಪೊಲೀಸ್ ಜೀಪಿಗೆ ಹಿಂಬದಿಯಿಂದ ಈಶರ್ ವಾಹನವನ್ನು ಡಿಕ್ಕಿ ಹೊಡೆದಿದ್ದಾನೆ. ಆಗ ಪಿಎಸ್ಐ ಆರೋಪಿಯ ಕಾಲಿಗೆ ಎರಡು ಸುತ್ತು ಗುಂಡುಗಳನ್ನು ಫಯರ್ ಮಾಡಿದ್ದಾರೆ. ಒಂದು ಐಶರ್ ವಾಹನದ ಮೇಲೆ ಹಾಗೂ ಮತ್ತೊಂದು ಆರೋಪಿಯ ಕಾಲಿಗೆ ಬಿದ್ದಿದೆ. ಇನ್ನೊಬ್ಬ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ.
ಗುಂಡು ತಗಲಿದ ಆರೋಪಿ ಅಬ್ದುಲ್ಲಾನನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈತನ ಮೇಲೆ ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋ ಹತ್ಯೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
























