ಇಡೀ ದಿನ ಟೋಲ್ ಸಂಗ್ರಹಿಸದೆ ಕಂಪನಿಗೆ ಲಕ್ಷಾಂತರ ರೂ. ನಷ್ಟ ಮಾಡಿ ಸೇಡು ತೀರಿಸಿಕೊಂಡ ನೌಕರರು
ನವದೆಹಲಿ : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಲೀಕರು ಕೊಡುವ ಬೋನಸ್ ಮತ್ತು ಉಡುಗೊರೆಗಾಗಿ ನೌಕರರು ಚಾತಕ ಪಕ್ಷಿಗಳಂತೆ ಕಾದು ಕುಳಿತಿರುತ್ತಾರೆ. ಸಾಮಾನ್ಯವಾಗಿ ಎಲ್ಲ ಸಂಸ್ಥೆಗಳು ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೌಕರರಿಗೆ ಬೋನಸ್ ಮತ್ತು ಉಡುಗೊರೆ ಕೊಡುತ್ತವೆ. ಆದರೆ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಫತೇಬಾದ್‌ನಲ್ಲಿರುವ ಟೋಲ್ ಗೇಟ್ ಸಿಬ್ಬಂದಿಗೆ ಮಾಲೀಕರು ಈ ವರ್ಷ ಅತ್ಯಲ್ಪ ಮೊತ್ತ ಬೋನಸ್ ನೀಡಿದ್ದರು. ಇದರಿಂದ ಕೆರಳಿದ ಸಿಬ್ಬಂದಿ ಅದನ್ನು ಪ್ರತಿಭಟಿಸಿದ ರೀತಿ ಮಾತ್ರ ವಿಶೇಷವಾಗಿತ್ತು.
ಸೋಮವಾರ ಇಡೀ ದಿನ ಈ ಟೋಲ್ ಗೇಟ್‌ನಲ್ಲಿ ಯಾವ ವಾಹನವೂ ಟೋಲ್ ಪಾವತಿ ಮಾಡಲಿಲ್ಲ. ತಾಸಿಗೆ ಸಾವಿರಾರು ವಾಹನ ಓಡಾಡುವ ಈ ಹೆದ್ದಾರಿಯಲ್ಲಿ ನಿನ್ನೆ ವಾಹನ ಮಾಲೀಕರಿಗೆ ದೀಪಾವಳಿ ಹಬ್ಬದ ಉಡುಗೊರೆ ಸಿಕ್ಕಿದಷ್ಟೇ ಖುಷಿ. ಯಾರಿಗೂ ಟೋಲ್ ಪಾವತಿಸುವ ತೊಂದರೆಯೇ ಇರಲಿಲ್ಲ. ಇದಕ್ಕೆಲ್ಲ ಕಾರಣ ಟೋಲ್ ಸಿಬ್ಬಂದಿ ಬೋನಸ್ ಕೊಡದ ಮಾಲೀಕರ ವಿರುದ್ಧ ಮಾಡಿದ ವಿಶಿಷ್ಟ ಪ್ರತಿಭಟನೆ.
ಟೋಲ್ ಗೇಟ್‌ನ 21 ಸಿಬ್ಬಂದಿ ಎಲ್ಲ ಗೇಟ್‌ಗಳನ್ನು ತೆರೆದಿಟ್ಟು ವಾಹನಗಳಿಗೆ ಮುಕ್ತವಾಗಿ ಓಡಾಡಲು ಅವಕಾಶ ಮಾಡಿಕೊಟ್ಟಿದ್ದರು. ಸಿಬ್ಬಂದಿ ಕರ್ತವ್ಯದಲ್ಲಿದ್ದರೂ ಟೋಲ್ ಹಣ ಸಂಗ್ರಹ ಮಾಡಿಲ್ಲ. ಹೀಗಾಗಿ ಸಾವಿರಾರು ವಾಹನಗಳು ಒಂದು ದಿನದ ಮಟ್ಟಿಗೆ ಟೋಲ್ ಪಾವತಿಸದೆ ಹೆದ್ದಾರಿಯಲ್ಲಿ ಓಡಾಡಿವೆ. ಇದರಿಂದ ಟೋಲ್ ಸಂಗ್ರಹಿಸಲು ಗುತ್ತಿಗೆ ವಹಿಸಿಕೊಂಡ ಕಂಪನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇಡೀ ದಿನ ಟೋಲ್ ಸಂಗ್ರಹ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಸಿಬ್ಬಂದಿ ವಾಹನಗಳ ಫಾಸ್ಟ್‌ಟ್ಯಾಗ್ ರೀಡಿಂಗ್ ಉಪಕರಣವನ್ನೂ ಬಂದ್ ಮಾಡಿಟ್ಟಿದ್ದರು.
ಶ್ರೀ ಸಿಂಗ್ & ದಾತಾರ್ ಕಂಪನಿ ಇಲ್ಲಿ ಟೋಲ್ ಸಂಗ್ರಹ ಮಾಡುತ್ತಿತ್ತು. ಈ ಸಲ ಈ ಕಂಪನಿ ಸಿಬ್ಬಂದಿಗೆ ಬರೀ 1,100 ರೂ. ದೀಪಾವಳಿ ಬೋನಸ್ ನೀಡಿತ್ತು. ಇದರಿಂದ ಕೆರಳಿದ ಸಿಬ್ಬಂದಿ ಒಂದಿಡೀ ದಿನ ಟೋಲ್ ಸಂಗ್ರಹ ಮಾಡದೆ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುವಂತೆ ಮಾಡಿದ್ದಾರೆ. ಕಳೆದ ಮಾರ್ಚ್‌ನಲ್ಲಷ್ಟೇ ಈ ಕಂಪನಿಗೆ ಟೋಲ್ ಸಂಗ್ರಹದ ಗುತ್ತಿಗೆ ಸಿಕ್ಕಿತ್ತು.
ಕಂಪನಿ ಬೇರೆ ಟೋಲ್ ಗೇಟ್‌ಗಳಿಂದ ಸಿಬ್ಬಂದಿಯನ್ನು ಕರೆತಂದು ಟೋಲ್ ಸಂಗ್ರಹಿಸಲು ಮುಂದಾದರೂ ಪ್ರತಿಭಟನೆ ಮಾಡುತ್ತಿದ್ದ ಸಿಬ್ಬಂದಿ ಅವರನ್ನು ತಡೆದು ಹಿಂದೆ ಕಳುಹಿಸಿದ್ದಾರೆ. ಕೊನೆಗೆ ಸಂಜೆ ಹೊತ್ತಿಗೆ ಪೊಲೀಸರು ಬಂದು ಎರಡೂ ಕಡೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ರಾತ್ರಿಗಾಗುವಾಗ ಟೋಲ್ ಸಮಗ್ರಹ ಪುನರಾರಂಭವಾಗಿದೆ. ಹಗಲಿಡೀ ವಾಹನಗಳು ಟೋಲ್ ಮುಕ್ತವಾಗಿ ಸಂಚರಿಸಿವೆ. ಇದರಿಂದ ಟೋಲ್ ಕಂಪನಿಗೆ 30 ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ.
























