ದೀಪಾವಳಿ ಸಂದರ್ಭದಲ್ಲಿ ದೇಶದ ಜನತೆಗೆ ಮೋದಿ ಭಾವನಾತ್ಮಕ ಪತ್ರ

ಸಹಕಾರ, ಸಕಾರಾತ್ಮಕತೆಯ ದೀಪಗಳನ್ನು ಬೆಳಗಿಸೋಣ ಎಂದು ಹಾರೈಕೆ

ನವದೆಹಲಿ : ದೀಪಾವಳಿಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಭಾವನಾತ್ಮಕ ಪತ್ರವೊಂದನ್ನು ಬರೆದು ಹಬ್ಬದ ಆಶಯದೊಂದಿಗೆ ದೇಶ ಹೇಗೆ ಮುನ್ನಡೆಯುತ್ತಿದೆ ಎಂಬುದನ್ನು ವಿವರಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆಸಲಾದ ಆಪರೇಷನ್ ಸಿಂದೂರ ಸಮಯದಲ್ಲಿ ಭಾರತ ಸದಾಚಾರವನ್ನು ಎತ್ತಿಹಿಡಿಯಿತು ಮಾತ್ರವಲ್ಲದೆ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಂಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಪತ್ರದಲ್ಲಿ ತಿಳಿಸಿದ್ದಾರೆ. ಜಾಗತಿಕ ಸಂಘರ್ಷಗಳು ನಡೆಯುತ್ತಿರುವ ಹೊರತಾಗಿಯೂ ದೇಶವು ಸ್ಥಿರತೆ ಮತ್ತು ಸೂಕ್ಷ್ಮತೆಯ ಸಂಕೇತವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ನಾವು ಮುಂದಿನ ದಿನಗಳಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದ್ದೇವೆ. ದೀಪಾವಳಿ ಶಕ್ತಿ ತುಂಬಿದ ಹಬ್ಬ, ಅಯೋಧ್ಯೆಯಲ್ಲಿ ರಾಮ ಮಂದಿರದ ಭವ್ಯ ನಿರ್ಮಾಣದ ನಂತರದ ಎರಡನೇ ದೀಪಾವಳಿ ಇದು. ಭಗವಾನ್ ಶ್ರೀರಾಮನು ನಮಗೆ ಧರ್ಮವನ್ನು ಎತ್ತಿಹಿಡಿಯಲು ಕಲಿಸುತ್ತಾನೆ ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಧೈರ್ಯವನ್ನು ನೀಡುತ್ತಾನೆ. ಕೆಲವು ತಿಂಗಳುಗಳ ಹಿಂದೆ ಆಪರೇಷನ್ ಸಿಂದೂರ ಸಮಯದಲ್ಲಿ ನಾವು ಇದರ ಜೀವಂತ ಉದಾಹರಣೆಯನ್ನು ನೋಡಿದ್ದೇವೆ. ಆಪರೇಷನ್ ಸಿಂದೂರ ಸಮಯದಲ್ಲಿ ಭಾರತವು ಧರ್ಮವನ್ನು ಎತ್ತಿಹಿಡಿಯಿತು ಮಾತ್ರವಲ್ಲದೆ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಂಡಿತು ಎಂದಿದ್ದಾರೆ.





















































 
 

ನಕ್ಸಲಿಸಂ ನಿರ್ಮೂಲನೆ ಈ ದೀಪಾವಳಿಯ ವಿಶೇಷವಾಗಿದೆ. ಏಕೆಂದರೆ, ಮೊದಲ ಬಾರಿಗೆ ದೂರದ ಪ್ರದೇಶಗಳು ಸೇರಿದಂತೆ ದೇಶಾದ್ಯಂತ ಅನೇಕ ಜಿಲ್ಲೆಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯನ್ನು ಬೇರು ಸಮೇತ ನಿರ್ಮೂಲನೆ ಮಾಡಿದ ಜಿಲ್ಲೆಗಳಿವು.
ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಸಂವಿಧಾನದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿ, ಹಿಂಸಾಚಾರದ ಹಾದಿಯನ್ನು ತ್ಯಜಿಸಿ ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರುವ ಅನೇಕ ವ್ಯಕ್ತಿಗಳನ್ನು ನಾವು ನೋಡಿದ್ದೇವೆ. ಇದು ರಾಷ್ಟ್ರಕ್ಕೆ ಒಂದು ಪ್ರಮುಖ ಸಾಧನೆಯಾಗಿದೆ. ಈ ಐತಿಹಾಸಿಕ ಸಾಧನೆಗಳ ಮಧ್ಯೆ ದೇಶವು ಇತ್ತೀಚಿನ ದಿನಗಳಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಪ್ರಾರಂಭಿಸಿದೆ, ಜಿಎಸ್​ಟಿಯಲ್ಲಿ ಬದಲಾವಣೆ ತರಲಾಗಿದೆ ಎಂದಿದ್ದಾರೆ.

ಎಲ್ಲಾ ಭಾಷೆಗಳನ್ನು ಗೌರವಿಸಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯಕ್ಕೆ ಆದ್ಯತೆ ನೀಡಬೇಕು. ನಮ್ಮ ಆಹಾರದಲ್ಲಿ ಎಣ್ಣೆಯ ಬಳಕೆಯನ್ನು ಶೇ. 10 ರಷ್ಟು ಕಡಿಮೆ ಮಾಡಿ ಯೋಗವನ್ನು ಅಳವಡಿಸಿಕೊಳ್ಳಬೇಕು.

ಒಂದು ದೀಪ ಇನ್ನೊಂದು ದೀಪವನ್ನು ಬೆಳಗಿದಾಗ ಅದರ ಬೆಳಕು ಕಡಿಮೆಯಾಗುವುದಿಲ್ಲ, ಬದಲಾಗಿ ಮತ್ತಷ್ಟು ಪ್ರಕಾಶಮಾನವಾಗುತ್ತದೆ ಎಂಬುದನ್ನು ದೀಪಾವಳಿ ನಮಗೆ ಕಲಿಸುತ್ತದೆ. ಅದೇ ಮನೋಭಾವದಿಂದ, ಈ ದೀಪಾವಳಿಯಲ್ಲಿ ನಮ್ಮ ಸಮಾಜ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮರಸ್ಯ, ಸಹಕಾರ ಮತ್ತು ಸಕಾರಾತ್ಮಕತೆಯ ದೀಪಗಳನ್ನು ಬೆಳಗಿಸೋಣ ಎಂದು ಪ್ರಧಾನಿ ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top