ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬ ನೆಪದಲ್ಲಿ ನಿಷೇಧಿಸಲು ಕರೆ
ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆ (WHO) ಅಡಿಕೆ ಮೇಲೆ ಮತ್ತೆ ವಕ್ರದೃಷ್ಟಿ ಬೀರಿದೆ. ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬ ನೆಪವೊಡ್ಡಿ ಅಡಿಕೆ ನಿಷೇಧ ಮಾಡಲು ಕರೆ ನೀಡಿದೆ. ಶ್ರೀಲಂಕಾದಲ್ಲಿ ನಡೆದ ಆಗ್ನೇಯ ಒಕ್ಕೂಟದೊಂದಿಗಿನ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶದಲ್ಲಿ ಅಡಿಕೆಯ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಮೇಲೆ ಅಪವಾದ ಹೊರಿಸುತ್ತಿರುವದು ಇದೇ ಮೊದಲಲ್ಲ. ಕಳೆದ ಸುಮಾರು ಒಂದೂವರೆ ದಶಕದಿಂದ ಅಡಿಕೆಯಿಂದ ಕ್ಯಾನ್ಸರ್ ಬರುತ್ತಿದೆ ಎಂಬ ನೆಪವೊಡ್ಡಿ ಆಗಾಗ ನಿಷೇಧದ ಬಗ್ಗೆ ಮಾತನಾಡುತ್ತಿದೆ. ಇದೀಗ ಮತ್ತೊಮ್ಮೆ ತನ್ನ ಆರೋಪವನ್ನು ಪುನರುಚ್ಚರಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಅಡಿಕೆ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ವಿಶ್ವ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಸಮಾವೇಶ ಅಕ್ಟೋಬರ್ 16ರಂದು ಮುಗಿದಿದೆ.
ಭಾರತ, ಬಾಂಗ್ಲಾ, ಭೂತಾನ್, ಉತ್ತರ ಕೊರಿಯಾ, ಮಾಲ್ಡೀವ್ಸ್, ಮಯನ್ಮಾರ್, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್ ಮೊದಲಾದ ರಾಷ್ಟ್ರಗಳು ಸಮಾವೇಶದಲ್ಲಿ ಭಾಗವಹಿಸಿದ್ದವು. ಕ್ಯಾನ್ಸರ್‌ಕಾರಕ ವಸ್ತುಗಳ ವಿಚಾರದಲ್ಲಿ ಸಮಾವೇಶದಲ್ಲಿ ಚರ್ಚೆ ನಡೆದಿದೆ. ಈ ಸಮಾವೇದಲ್ಲಿ ದೇಶಗಳಲ್ಲಿ ಒಟ್ಟಾಗಿ 28 ಕೋಟಿ ವಯಸ್ಕರು, 1.1 ಕೋಟಿ ಅಪ್ರಾಪ್ತರು ಹೊಗೆರಹಿತ ತಂಬಾಕು, ನಿಕೋಟಿನ್ ಮತ್ತಿತರ ವ್ಯಸನಿಗಳಿದ್ದಾರೆ. ಇವುಗಳ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಇದರಲ್ಲಿ ಅಡಿಕೆಯನ್ನು ಕೂಡಾ ಸೇರಿಸಲಾಗಿದೆ.
ಹೊಗೆರಹಿತ ತಂಬಾಕು, ನಿಕೋಟಿನ್, ಅಡಿಕೆ ಉತ್ಪಾದನೆ ಹಾಗೂ ಮಾರಾಟ ಇತ್ಯಾದಿಗಳ ಮೇಲೆ ನಿಯಂತ್ರಣಕ್ಕೆ ಚೌಕಟ್ಟು, ರಾಷ್ಟ್ರೀಯ ಶಾಸನ ತರಬೇಕು, ಉತ್ಪಾದನೆ, ಮಾರಾಟ, ಜಾಹೀರಾತು ಪ್ರಚಾರ, ಪ್ರಾಯೋಜಕತ್ವ ನಿಷೇಧಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆ ನೀಡಿದೆ. ಅಡಿಕೆ ಸಹಿತ ಎಲ್ಲಾ ಉತ್ಪನ್ನಗಳನ್ನು ನಿಷೇಧ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಅಡಿಕೆಯೇ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ರೈತರಲ್ಲಿ ಮತ್ತೊಮ್ಮೆ ಆತಂಕ ತಲೆದೋರಿದೆ. ಅಡಿಕೆಯ ನೇರ ಸೇವನೆಯಿಂದ ಯಾವುದೇ ಆರೋಗ್ಯ ಹಾನಿಯಿಲ್ಲ ಎಂದು ಆಗಾಗ ಸಾಬೀತುಪಡಿಸಿದರೂ ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಮೇಲೆ ಅಪವಾದ ಹೊರಿಸುವುದನ್ನು ಬಿಟ್ಟಿಲ್ಲ.
























