ಅತಿದೊಡ್ಡ ದೀಪಗಳ ಪ್ರದರ್ಶನ, ಅತಿಹೆಚ್ಚು ಜನರು ಏಕಕಾಲದಲ್ಲಿ ದೀಪದ ಆರತಿ ಮಾಡಿದ ದಾಖಲೆ
ಅಯೋಧ್ಯೆ : ಅಯೋಧ್ಯೆಯ ದೀಪಾವಳಿ ಮತ್ತೊಮ್ಮೆ ವಿಶ್ವ ದಾಖಲೆ ಮಾಡಿದೆ. ಈ ವರ್ಷ ಸರಯೂ ನದಿಯ ದಡದಲ್ಲಿ 26 ಲಕ್ಷಕ್ಕೂ ಅಧಿಕ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಎರಡು ಗಿನ್ನಿಸ್ ವಿಶ್ವ ದಾಖಲೆಗಳನ್ನು ಮಾಡಲಾಗಿದೆ. ಈ ದೀಪಗಳ ಜಗಮಗಿಸುವ ಬೆಳಕಿನಲ್ಲಿ ಅಯೋಧ್ಯೆ ವಿಶಿಷ್ಟವಾಗಿ ಕಂಗೊಳಿಸಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರ ಸ್ವೀಕರಿಸಿದರು.

ಉತ್ತರ ಪ್ರದೇಶ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತವು ಆಯೋಜಿಸಿದ್ದ ‘ದೀಪೋತ್ಸವ’ ಕಾರ್ಯಕ್ರಮದಲ್ಲಿ, ಸರಯೂ ನದಿಯ ದಂಡೆಯಲ್ಲಿ 26,17,215 ದೀಪಗಳನ್ನು ಜನರು ಬೆಳಗಿಸಿ, ಅತಿದೊಡ್ಡ ದೀಪಗಳ ಪ್ರದರ್ಶನ ಎಂಬುದಕ್ಕಾಗಿ ದಾಖಲೆಯನ್ನು ನಿರ್ಮಿಸಿತು. ಅದರ ಜೊತೆಗೆ ಅತಿಹೆಚ್ಚು ಜನರು ಏಕಕಾಲದಲ್ಲಿ ದೀಪದ ಆರತಿಯನ್ನು ಮಾಡಿದ ಎರಡನೇ ದಾಖಲೆಯೂ ನಿರ್ಮಾಣವಾಯಿತು.

ಈ ಸಂದರ್ಭದಲ್ಲಿ ನಡೆದ ರಾಮಲೀಲಾ ಪ್ರದರ್ಶನವು ವಾತಾವರಣಕ್ಕೆ ಮೆರುಗು ನೀಡಿತು. ರಾಮ್ ಕಿ ಪೈಡಿಯಲ್ಲಿ ಅದ್ಭುತ ಲೇಸರ್ ಮತ್ತು ಬೆಳಕಿನ ಪ್ರದರ್ಶನ ಆಯೋಜಿಸಲಾಗಿತ್ತು. ಇದು ಅಲ್ಲಿ ನೆರೆದಿದ್ದ ಜನರನ್ನು ಮಂತ್ರಮುಗ್ಧಗೊಳಿಸುವಂತೆ ಮಾಡಿತ್ತು. ಸಾವಿರಾರು ದೀಪಗಳ ಬೆಳಕಿನೊಂದಿಗೆ ಲೇಸರ್ ಶೋ ಸೇರಿ, ಸರಯೂ ನದಿಯ ದಡವು ದೀಪಗಳಿಂದ ಕಂಗೊಳಿಸಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರದರ್ಶನವನ್ನು ವೀಕ್ಷಿಸಿದರು. ಡ್ರೋನ್ ಪ್ರದರ್ಶನದ ನಂತರ, ಆಗಸದಲ್ಲಿ ಚಿತ್ತಾರ ಮೂಡಿಸಿದ ಪಟಾಕಿಗಳ ಬೆಳಕು ನೆರೆದಿದ್ದವರನ್ನು ಚಕಿತಗೊಳಿಸಿತು.
ಗಿನ್ನಿಸ್ ವಿಶ್ವ ದಾಖಲೆಯ ಅಧಿಕಾರಿಗಳು ದಾಖಲೆಯನ್ನು ಘೋಷಿಸುತ್ತಿದ್ದಂತೆ, ಯೋಗಿ ಆದಿತ್ಯನಾಥ್ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು. ಆನಂತರ ಮಾತನಾಡಿದ ಅವರು, ಪ್ರತಿಯೊಂದು ಸತ್ಯಕ್ಕೆ ಕಷ್ಟ ಬರಬಹುದು ಆದರೆ ಸೋಲೆಂದು ಸಿಗದು ಎನ್ನುವುದನ್ನು ಪ್ರತಿಯೊಂದು ದೀಪ ನೆನಪಿಸುತ್ತದೆ. ಜಯಶಾಲಿಯಾಗುವುದು ಸತ್ಯ ಮಾತ್ರ. ಆ ವಿಜಯದ ಹಣೆಬರಹದೊಂದಿಗೆ ಸನಾತನ ಧರ್ಮವು 500 ವರ್ಷಗಳ ಕಾಲ ನಿರಂತರವಾಗಿ ಹೋರಾಡಿದೆ. ಆ ಹೋರಾಟಗಳ ಫಲವಾಗಿ, ಅಯೋಧ್ಯೆಯಲ್ಲಿ ಭವ್ಯ ಮತ್ತು ದಿವ್ಯ ಮಂದಿರವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
























