ಹೈಕೋರ್ಟ್‌ ಮೆಟ್ಟಿಲೇರಿದ ಚಿತ್ತಾಪುರದ ಆರ್‌ಎಸ್‌ಎಸ್‌ ಪಥಸಂಚಲನ ಜಟಾಪಟಿ

ಅ.24ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್​​​ಎಸ್​​​ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ವಿಚಾರ ಹೈಕೋರ್ಟ್‌ ಮೆಟ್ಟಿಲೇರಿದ್ದು, ವಿಚಾರಣೆ ಮಾಡಿದ ಕಲಬುರಗಿ ಹೈಕೋರ್ಟ್ ಪೀಠ, ಪಥಸಂಚಲನ ಮಾರ್ಗದೊಂದಿಗೆ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಜೊತೆಗೆ ಅಕ್ಟೋಬರ್​​ 24ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿದೆ.

ಚಿತ್ತಾಪುರದಲ್ಲಿ ಇಂದು (ಭಾನುವಾರ) ಆರ್​ಎಸ್​ಎಸ್​​ ಪಥ ಸಂಚಲನ ನಡೆಯಬೇಕಿತ್ತು. ಆದರೆ ಅನುಮತಿ ನಿರಾಕರಿಸಿ ತಹಸೀಲ್ದಾರ್​ ನಾಗಯ್ಯ ಹಿರೇಮಠ ಆದೇಶ ಹೊರಡಿಸಿದ್ದರು. ಹೀಗಾಗಿ ಆರ್​ಎಸ್​ಎಸ್ ಕಾರ್ಯಕರ್ತರು ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಡಿಸಿ ಕ್ರಮ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಆರ್​​ಎಸ್​ಎಸ್​ ಕಲಬುರಗಿ ಜಿಲ್ಲಾ ಪ್ರಮುಖರಾದ ಅಶೋಕ್ ಪಾಟೀಲ್ ಎಂಬುವವರು ರಿಟ್ ಅರ್ಜಿ ಸಲ್ಲಿಸಿದ್ದರು.





















































 
 

ನ್ಯಾ. ಎಂಜಿಎಸ್​​ ಕಮಲ್ ಅವರ ಪೀಠದಲ್ಲಿ ತುರ್ತು ವಿಚಾರಣೆ ಮಾಡಲಾಯಿತು. ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ಕಾನೂನಿನ ಪ್ರಕಾರ ಅನುಮತಿ ಕೊಡಬೇಕಾದವರು ಯಾರು ಎಂದು ಜಡ್ಜ್ ಪ್ರಶ್ನಿಸಿದರು. ಪೊಲೀಸರಿಗೆ ಭದ್ರತೆ ನೀಡಲು ಮಾಹಿತಿ ನೀಡಿದ್ದೆವು. ಅ.13ರಂದೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಅ.17ರಂದು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್​​​ಗೆ ಅರ್ಜಿ ಸಲ್ಲಿಸಿದ್ದೆವು. ಶನಿವಾರ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದಾರೆ ಎಂದು ಅರುಣ್ ಶ್ಯಾಮ್ ವಾದಿಸಿದರು.

ಪ್ರತಿಭಟನೆ ಮಾಡದೆ, ಘೋಷಣೆ ಕೂಗದೆ ಗುಂಪು ನಡೆಯಲು ಅನುಮತಿ ಅಗತ್ಯವೆ. ದೊಡ್ಡ ಕುಟುಂಬದ ಸದಸ್ಯರು ಪರಿಸರದ ಅರಿವು ಮೂಡಿಸುವ ಮೆರವಣಿಗೆಗೆ ಅನುಮತಿ ಪಡೆಯಬೇಕೆ, ಯಾವ ಕಾನೂನಿನ ಅಡಿಯಲ್ಲಿ ಅನುಮತಿ ಪಡೆಯಬೇಕೆಂದು ಹೈಕೋರ್ಟ್ ಪ್ರಶ್ನೆ ಮಾಡಿತು.
ಇಂಥ ವಿಚಾರಗಳಿಗೆ ಸ್ಪಷ್ಟ ಕಾನೂನಿಲ್ಲ ಎಂದು ಅರ್ಜಿದಾರರ ಪರ ವಕೀಲ ವಾದಿರಾಜ್ ಕಡ್ಲೂರ್ ಉತ್ತರಿಸಿದರು. ಇಂದು ಮತ್ತೊಂದು ಸಂಘಟನೆ ಪ್ರತಿಭಟನೆ‌ ಹಮ್ಮಿಕೊಂಡಿದೆ. ಭೀಮ್ ಆರ್ಮಿ, ದಲಿತ್ ಪ್ಯಾಂಥರ್ಸ್ ಕೂಡ ಪ್ರತಿಭಟನೆಗೆ ಅನುಮತಿ ಕೋರಿವೆ. ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟು ಅನುಮತಿ‌ ನೀಡಿಲ್ಲವೆಂದು ಸರ್ಕಾರದ ವಾದವಾಗಿತ್ತು.

ಈ ವೇಳೆ ಆರ್​ಎಸ್​​ಎಸ್, ಭೀಮ್ ಆರ್ಮಿ ಎರಡೂ ಸಂಘಟನೆಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲು ಹೈಕೋರ್ಟ್ ಸೂಚನೆ ನೀಡಿದೆ. ನ.2ರಂದು ಆರ್​​ಎಸ್​ಎಸ್ ಪಥಸಂಚಲನ ನಡೆಸಲು ಅರ್ಜಿದಾರರು ಒಪ್ಪಿಗೆ ಸೂಚಿಸಿದ್ದಾರೆ. ರಾಜ್ಯದೆಲ್ಲೆಡೆ 250 ಶಾಂತಿಯುತ ಪಥಸಂಚಲನ ನಡೆಸಲಾಗಿದೆ. ಎಲ್ಲಿಯೂ ಶಾಂತಿಭಂಗವಾಗಿಲ್ಲವೆಂದು ಅರ್ಜಿದಾರರ ಹೇಳಿಕೆ ದಾಖಲಿಸಿದ ಹೈಕೋರ್ಟ್ ಹೊಸದಾಗಿ ಅರ್ಜಿ ಕೊಡಲು ಅರ್ಜಿದಾರರಿಗೆ ಸೂಚಿಸಿದೆ.

error: Content is protected !!
Scroll to Top